ADVERTISEMENT

ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ ಅಡಗುತಾಣ ಬದಲಾಯಿಸುತ್ತಿದ್ದಾರೆ ಜಿಹಾದಿಗಳು

ಮೆಹಬೂಬ್ ಪಾಷಾ ಸೇರಿ 17 ಶಂಕಿತರ ಬಂಧನಕ್ಕೆ ಕಾರ್ಯಾಚರಣೆ ಚುರುಕು: ಸಿಸಿಬಿ ಪೊಲೀಸರಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 8:26 IST
Last Updated 13 ಜನವರಿ 2020, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಇಸ್ಲಾಮಿಕ್ ಸ್ಟೇಟ್ ಉಗ್ರ ಎನ್ನಲಾದಮೆಹಬೂಬ್ ಪಾಷಾ ಸೇರಿದಂತೆ 17 ಶಂಕಿತರ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಶಂಕಿತರು ಅಡಗುದಾಣಗಳನ್ನು ಬದಲಾಯಿಸಿಕೊಂಡು ತಪ್ಪಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಾಗಿರುವ 17 ಮಂದಿಯ ಬಂಧನಕ್ಕೆ ಆಂತರಿಕ ಭದ್ರತಾ ವಿಭಾಗ ಮತ್ತು ಗುಪ್ತಚರ ಅಧಿಕಾರಿಗಳನ್ನೊಳಗೊಂಡ ಕ್ರೈಂಬ್ರಾಂಚ್ (ಸಿಸಿಬಿ) ನೇತೃತ್ವದ ಜಂಟಿ ತಂಡವು ಪ್ರಯತ್ನ ಮುಂದುವರಿಸಿದೆ.ಪಾಷಾ ಮತ್ತು ಆತನ 16 ಸಹಚರರ ವಿರುದ್ಧ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಈಗಾಗಲೇ ಸಿಸಿಬಿ ಇನ್‌ಸ್ಪೆಕ್ಟರ್ ಎಫ್‌ಐಆರ್‌ ದಾಖಲಿಸಿದ್ದು, ಹಲವು ಮಹತ್ವದ ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ.

ಈ ಮಧ್ಯೆ, ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆ ತಾಲ್ಲೂಕಿನ ಮದರಸಾವೊಂದರಿಂದ ಶನಿವಾರ ತಡರಾತ್ರಿ ವಶಕ್ಕೆ ಪಡೆಯಲಾಗಿರುವ ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಒಬ್ಬನ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ‘ಈತ ಮೂಲಭೂತವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಆದರೆ ಈತನ ಪಾತ್ರ ಸಣ್ಣಮಟ್ಟಿನದು. ಸದ್ಯ ವಿಚಾರಣೆಗೆ ಒಳಪಡಿಸುತ್ತಿದ್ದೇವೆ. ಅವಶ್ಯವೆನಿಸಿದಲ್ಲಿ ಬಂಧಿಸುತ್ತೇವೆ. ಇಲ್ಲವಾದಲ್ಲಿ ವಿಸ್ತೃತ ವಿಚಾರಣೆ ಬಳಿಕ ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.

ಆದಾಗ್ಯೂಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅನ್ವಯ ಈವರೆಗೆ ಯಾರನ್ನೂ ಬಂಧಿಸಿಲ್ಲ. ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಶಂಕಿತರ ಪೈಕಿ ಒಬ್ಬನನ್ನಾದರೂ ವಶಕ್ಕೆಪಡೆಯುವಲ್ಲಿ ನಾವು ಸಫಲರಾದರೆ, ಉಳಿದ ಕಾರ್ಯಾಚರಣೆ ಸುಲಭವಾಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

ತಮಿಳುನಾಡು ಪೊಲೀಸರು ಐವರು ಶಂಕಿತರನ್ನು ಇತ್ತೀಚೆಗೆ ಬಂಧಿಸಿದ್ದು, ಅದರ ಬೆನ್ನಲ್ಲೇ ಅವರು ಎಚ್ಚರಿಕೆ ವಹಿಸತೊಡಗಿದ್ದಾರೆ. ಅಡಗುತಾಣಗಳನ್ನು ನಿರಂತರವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಅಲ್–ಉಮ್ಮಾ ಸಂಘಟನೆಯನ್ನು ನಿಷೇಧಿಸಿದ ಬೆನ್ನಲ್ಲೇ ಈ ಶಂಕಿತರು ತಮ್ಮದೇ ಕೃತ್ಯಗಳನ್ನು ಆರಂಭಿಸಿದ್ದು, ಇಸ್ಲಾಮಿಕ್ ಸ್ಟೇಟ್ ಜತೆ ಸಂಪರ್ಕ ಹೊಂದಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಶಂಕಿತರು ಇಸ್ಲಾಮಿಕ್ ಸ್ಟೇಟ್‌ಗೆ ಜನರನ್ನು ಸೇರಿಸಲು ಯತ್ನಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾಷಾನನ್ನು ಬಂಧಿಸಿದರೆ ಅವರ ಸಂಚನ್ನು ನಾವು ತಡೆಯಬಹುದು. ಆದರೆ ಪಾಷಾ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತನ ಫೋನ್‌ ಸ್ವಿಚ್ ಆಫ್ ಆಗಿವೆ ಎಂದು ಅವರು ಹೇಳಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್ ದಾಖಲಿಸಿದ್ದ ದೂರಿನಲ್ಲೇನಿತ್ತು?:ಮೆಹಬೂಬ್ ಪಾಷಾಗುರಪ್ಪನಪಾಳ್ಯದ ಮನೆಯಲ್ಲೇ ನೆಲೆಸಿದ್ದಾನೆ ಎಂದುಸಿಸಿಬಿ ಇನ್‌ಸ್ಪೆಕ್ಟರ್ ದಾಖಲಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಎಂಬುವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ಖ್ವಾಜಾ ಮುಹಿನುದ್ದೀನ್ ಅಲಿಯಾಸ್ ಜಲಾಲ್ ಮತ್ತು ಆತನ ಸಹಚರರಾರ ಅಬ್ದುಲ್ ಸಮದ್, ತೌಸಿಫ್ ಅಲಿಯಾಸ್ ತೌಕಿರ್, ಸೈಯದ್ ಅಲಿ ನವಾಜ್, ಜಾಫರ್ ಅಲಿ ಅಲಿಯಾಸ್ ಉಮರ್, ಅಬ್ದುಲ್ ಶಮೀನ್ ಮತ್ತು ಇತರರ ಜೊತೆ ಮೆಹಬೂಬ್‌ ಪಾಷಾ ಸಂಪರ್ಕವಿಟ್ಟುಕೊಂಡಿದ್ದ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಆರೋಪಿ ಮೊಹಮ್ಮದ್ ಮನ್ಸೂರ್ ಎಂಬಾತನಿಗೆ ನಿಷೇಧಿತ ಸಿಮಿ (ಇಂಡಿಯನ್ ಮುಜಾಹಿದ್ದೀನ್) ಸಂಘಟನೆ ಸದಸ್ಯ ಸಾದಿಕ್ ಸಮೀರ್ ಜೊತೆ ಸಂಪರ್ಕವಿತ್ತು ಎಂಬ ಸಂಗತಿಯೂ ತನಿಖೆಯಿಂದ ಗೊತ್ತಾಗಿದೆ ಎಂಬುದಾಗಿ ಸಿಸಿಬಿ ಇನ್‌ಸ್ಪೆಕ್ಟರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.