ADVERTISEMENT

ಕೇಂದ್ರ ಸರ್ಕಾರದಿಂದ ಜನರ ಸ್ವಾತಂತ್ರ್ಯಹರಣ: ವಿ.ಎಸ್‌ ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 17:30 IST
Last Updated 21 ಜುಲೈ 2021, 17:30 IST
ವಿ.ಎಸ್‌ ಉಗ್ರಪ್ಪ
ವಿ.ಎಸ್‌ ಉಗ್ರಪ್ಪ    

ಬೆಂಗಳೂರು: ‘ಪೆಗಾಸಸ್‌ ಕುತಂತ್ರಾಂಶವನ್ನು ಬಳಸಿಕೊಂಡು ಗೂಢಚರ್ಯೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನರ ಸ್ವಾತಂತ್ರ್ಯಹರಣ ಮಾಡಿದೆ’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ನಿಗಾ ಇಡುತ್ತಿದ್ದ ಕೇಂದ್ರ ಸರ್ಕಾರ, ನೇರವಾಗಿ ಅವರ ಮೊಬೈಲ್‌ ಫೋನ್‌ಗಳ ಒಳಗೆ ಪ್ರವೇಶಿಸಿದೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಮೇಲೂ ಗೂಢಚರ್ಯೆ ನಡೆಸಲಾಗಿದೆ. ಇದರ ಹೊಣೆ ಹೊತ್ತು ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಜೆಡಿಎಸ್‌–ಸಮ್ಮಿಶ್ರ ಸರ್ಕಾರ ಪತನಕ್ಕೂ ಪೆಗಾಸಸ್‌ ತಂತ್ರಾಂಶ ಬಳಿ ಗೂಢಚರ್ಯೆ ನಡೆಸಿರುವುದು ಬಹಿರಂಗವಾಗಿದೆ. ಕೇಂದ್ರ ಸರ್ಕಾರ ಗೂಢಚರ್ಯೆ ನಡೆಸುತ್ತಿರುವುದನ್ನು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಗೂಢಚರ್ಯೆಯಿಂದ ದೇಶದ ರಕ್ಷಣೆಗೆ ಸಂಬಂಧಿಸಿದ ಮಾಹಿತಿಗಳೂ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.

ADVERTISEMENT

ಮಾಜಿ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿ, ‘ಪೆಗಾಸಸ್ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.