ಬೆಂಗಳೂರು: ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಮೆಡ್–ಕೆ 3ನೇ ಸುತ್ತಿನ ಕೌನ್ಸೆಲಿಂಗ್ ನಡೆಸದಂತೆ ಸೂಚಿಸಬೇಕು ಎಂದು ವಿದ್ಯಾರ್ಥಿ–ಪೋಷಕರು ಒತ್ತಾಯಿಸಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಗೊಂದಲಗಳಿಂದ ಈ ಬಾರಿ ರಾಜ್ಯದಲ್ಲೂ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬವಾಗಿದೆ.
ಆದರೆ, ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ನಡೆಸಿದ್ದ ಪ್ರವೇಶ ಪರೀಕ್ಷೆಯಲ್ಲೂ ರ್‍ಯಾಂಕ್ ಪಡೆದವರು ಶುಲ್ಕ ಪಾವತಿಸಿ, ಸೀಟು ಕಾಯ್ದಿರಿಸಿದ್ದಾರೆ. ಈಗಾಗಲೇ ಎರಡು ಸುತ್ತುಗಳು ಮುಗಿದಿವೆ. ಸಿಇಟಿಯಲ್ಲಿ ಉತ್ತಮ ಕಾಲೇಜು ಸಿಕ್ಕರೆ ಕಾಮೆಡ್–ಕೆ ಸೀಟು ಬಿಟ್ಟು ಕೊಡುತ್ತಾರೆ. ಬಯಸಿದ ಕಾಲೇಜಿನಲ್ಲಿ ಸೀಟು ಸಿಗದವರು ಮೂರನೇ ಸುತ್ತಿನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ, ಕೌನ್ಸೆಲಿಂಗ್ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.
ಕೆಇಎ ಸೆ.1ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಮಾಡುತ್ತಿದೆ. ಕಾಮೆಡ್–ಕೆ ಆ.26ರಿಂದ 30ರವರೆಗೆ ಮೂರನೇ ಸುತ್ತಿನ ಕೌನ್ಸೆಲಿಂಗ್ ನಿಗದಿಪಡಿಸಿದೆ. ಇದರಿಂದ ಕಾಮೆಡ್–ಕೆನಲ್ಲಿ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಆಯ್ಕೆಯಾಗಿ, ಪ್ರವೇಶ ಪಡೆದ ವಿದ್ಯಾರ್ಥಿಗಳು ಕೆಇಎ ಸುತ್ತನಲ್ಲಿ ಸರ್ಕಾರಿ ಕೋಟಾದ ಸೀಟು ಪಡೆದರೂ ವ್ಯರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.