ಬೆಂಗಳೂರು: ‘ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜನಪರವಾದ ಹಾಗೂ ಬಡವರಿಗೆ ಸಂಬಂಧಿಸಿದ ಒಂದೇ ಒಂದು ಹೋರಾಟ ಮಾಡಿಲ್ಲ, ಕೇವಲ ಹೇಳಿಕೆಗಳನ್ನು ನೀಡುವುದರಲ್ಲೇ ನಿರತರಾಗಿದ್ದಾರೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ವಿರುದ್ಧ ಕಿಡಿಕಾರಿದ ಸಚಿವರು, ‘ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ಯಾವುದರಲ್ಲಾದರೂ ವೈಫಲ್ಯ ಆಗಿದೆ ಅಂತ ಹೇಳಿದ್ದಾರಾ? ಏಕೆಂದರೆ ನಮ್ಮ ಸರ್ಕಾರ ಯಾವುದರಲ್ಲೂ ವಿಫಲವಾಗಿಲ್ಲ’ ಎಂದು ಹೇಳಿದರು.
‘ವಿರೋಧಪಕ್ಷಗಳಿಗೂ ಜವಾಬ್ದಾರಿ ಇದೆ. ಹೋರಾಟ ಮಾಡಲೆಂದು, ಪ್ರಶ್ನಿಸಲೆಂದು ಜನರು ಅವರನ್ನು ಕಳುಹಿಸಿದ್ದಾರೆ. ಆದರೆ, ಅವರು ಮುಡಾ ಇತ್ಯಾದಿಗಳ ಬಗ್ಗೆ ಹಾರಿಕೆಯ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಜನಪರ ಎನಿಸಿದ ಒಂದಾದರೂ ವಿಷಯ ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದಾರಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.