ADVERTISEMENT

ವಂಚನೆ ಪ್ರಕರಣ ಇ.ಡಿ. ವಶಕ್ಕೆ ಅನಾಸ್‌ ಅಹ್ಮದ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:48 IST
Last Updated 21 ಜನವರಿ 2022, 16:48 IST

ಬೆಂಗಳೂರು: ಪ್ರತಿದಿನ, ವಾರಕ್ಕೊಮ್ಮೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಪವರ್‌ ಬ್ಯಾಂಕ್‌ ಮತ್ತಿತರ ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ₹ 80 ಕೋಟಿಗೂ ಹೆಚ್ಚು ಮೊತ್ತವನ್ನು ಸಾರ್ವಜನಿಕರಿಂದ ಸಂಗ್ರಹಿಸಿ, ವಂಚಿಸಿರುವ ಆರೋಪ ಎದುರಿಸುತ್ತಿರುವ ಉದ್ಯಮಿ ಅನಾಸ್‌ ಅಹ್ಮದ್‌ ಎಂಬುವವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ವಿಚಾರಣೆಗಾಗಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಚೆನ್ನೈನ ಸಿಬಿ–ಸಿಐಡಿ ಪೊಲೀಸರು ಅನಾಸ್‌ ಅಹ್ಮದ್‌ ಅವರನ್ನು ವಂಚನೆ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಅಲ್ಲಿನ ಪುಳ್ಹಾಲ್‌ ಕೇಂದ್ರ ಕಾರಾಗೃಹದಲ್ಲಿ ಆರೋಪಿಯನ್ನು ಇರಿಸಲಾಗಿತ್ತು. ₹ 80 ಕೋಟಿ ವಂಚಿಸಿರುವ ಪ್ರಕರಣದಲ್ಲಿ ವಿಚಾರಣೆಗಾಗಿ ಆರೋಪಿಯನ್ನು ವಶಕ್ಕೆ ಪಡೆಯಲು ಅನುಮತಿ ನೀಡುವಂತೆ ಕೋರಿ ಇ.ಡಿ ಅಧಿಕಾರಿಗಳು ಬೆಂಗಳೂರಿನ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆರು ದಿನಗಳ ಕಾಲ ಆರೋಪಿಯನ್ನು ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸಲು ಇ.ಡಿ ಅಧಿಕಾರಿಗಳಿಗೆ ಅನುಮತಿ ನೀಡಿ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿತ್ತು. ತಕ್ಷಣವೇ ಚೆನ್ನೈಗೆ ತೆರಳಿದ ತನಿಖಾ ತಂಡ ಕೇಂದ್ರ ಕಾರಾಗೃಹದಲ್ಲಿ ಆರೋಪಿಯನ್ನು ಬಂಧಿಸಿ, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಠೇವಣಿ ಸಂಗ್ರಹಿಸಿ ವಂಚಿಸಿರುವ ಪ್ರಕರಣದಲ್ಲಿ ಅನಾಸ್‌ ಅಹ್ಮದ್‌ ಪಾಲುದಾರಿಕೆಯ ಎಚ್‌ ಅಂಡ್‌ ಎಸ್‌ ವೆಂಚರ್ಸ್‌ ಇಂಕ್‌ ಮತ್ತು ಕ್ಲಿಫರ್ಡ್‌ ವೆಂಚರ್ಸ್‌ ಕಂಪನಿಗಳ ಪಾತ್ರವಿದೆ ಎಂದು ಇ.ಡಿ ಆರೋಪಿಸಿದೆ. ಅಲ್ಲದೇ ಆರೋಪಿಯು ಚೀನಾ ಮೂಲದ ಆರೋಪಿಗಳ ಜತೆಗೂ ನಂಟು ಹೊಂದಿರುವ ಶಂಕೆ ಇದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.