ADVERTISEMENT

ಕಾರವಾರದ ಬಾಣಸಿಗ ಕಾಬೂಲ್‌ನಲ್ಲಿ ಅಪಹರಣ

ಕಡವಾಡದ ಕ್ರಿಶ್ಚಿಯನ್‌ ವಾಡಾದಲ್ಲಿರುವ ಕುಟುಂಬ ಸದಸ್ಯರಲ್ಲಿ ತೀವ್ರ ಆತಂಕ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 16:35 IST
Last Updated 3 ಆಗಸ್ಟ್ 2018, 16:35 IST
ಪ್ಯಾಟ್ಸನ್ ರೋಡ್ರಿಗಸ್
ಪ್ಯಾಟ್ಸನ್ ರೋಡ್ರಿಗಸ್   

ಕಾರವಾರ: ತಾಲ್ಲೂಕಿನ ಕಡವಾಡ ಸಮೀಪದ ಕ್ರಿಶ್ಚಿಯನ್ ವಾಡಾ ನಿವಾಸಿ ಪ್ಯಾಟ್ಸನ್ ರೋಡ್ರಿಗಸ್ (39) ಅವರನ್ನು ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಉಗ್ರರು ಅಪಹರಿಸಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸುತ್ತಿಲ್ಲ ಎಂದು ತೀವ್ರ ಆತಂಕಗೊಂಡಿದ್ದಾರೆ.

ಪ್ರಸ್ತುತ ಫ್ರಾನ್ಸ್‌ ಮೂಲದ ಸೊಡೆಕ್ಸೊ ಕಂಪನಿಯಲ್ಲಿ ಅವರು ಬಾಣಸಿಗರಾಗಿ ಕೆಲಸ ಮಾಡುತ್ತಿರುವ ಅವರು, 10 ವರ್ಷಗಳಿಂದ ಕಾಬೂಲ್‌ನಲ್ಲಿ ವಾಸವಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರ ಸೋದರ ಸಂಬಂಧಿ ಅಲೆಕ್ಸ್ ಡಿಸಿಲ್ವಾ, ‘ಅವರು ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ ಕರೆ ಮಾಡಿ ಮನೆಯವರನ್ನು ವಿಚಾರಿಸಿಕೊಳ್ಳುತ್ತಿದ್ದರು. ಅದೇ ರೀತಿ, ಗುರುವಾರ ಬೆಳಿಗ್ಗೆಯೇ ಕರೆ ಮಾಡಿ ಕೆಲಸಕ್ಕೆ ಹೋಗಿದ್ದರು. ಅದಾದ ಬಳಿಕ ಕಾಬೂಲ್‌ನಲ್ಲಿ ಉಗ್ರರು ಮೂವರು ವಿದೇಶಿಯರನ್ನು ಅಪಹರಿಸಿದ ಮಾಹಿತಿ ಮಾಧ್ಯಮಗಳ ಮೂಲಕ ತಿಳಿಯಿತು. ಅವರಲ್ಲಿ ಪ್ಯಾಟ್ಸನ್ ಕೂಡ ಒಬ್ಬರು ಒಂದು ಗೊತ್ತಾಗಿದೆ. ಭಾರತೀಯ ರಾಯಭಾರ ಕಚೇರಿಯ ಜತೆ ಸಂಪರ್ಕ ಹೊಂದಲು ಕುಟುಂಬದ ಸದಸ್ಯರು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

ಆರು ವರ್ಷಗಳ ಹಿಂದೆ ಮದುವೆಯಾಗಿರುವ ಅವರಿಗೆ ಯುಕೆಜಿ ತರಗತಿಗೆ ಹೋಗುವ ಒಬ್ಬ ಪುತ್ರನಿದ್ದಾನೆ. ಪತ್ನಿ ಫ್ರಿಲ್ಲಾ ಗೃಹಿಣಿಯಾಗಿದ್ದು, ಇಬ್ಬರೂ ಕಾರವಾರದಲ್ಲಿ ಪ್ಯಾಟ್ಸನ್ ಅವರ ತಂದೆ, ತಾಯಿ ಜತೆ ವಾಸ ಮಾಡುತ್ತಿದ್ದಾರೆ.
ಆ.13ರಂದು ಅವರ ಮಗ ಪ್ರೆಸ್ಲಿಯ ಜನ್ಮದಿನಾಚರಣೆಯಿತ್ತು. ಮೇ 15ಕ್ಕೆ ಮನೆಗೆ ಬಂದಿದ್ದ ಅವರು, ಮೇ 27ಕ್ಕೆ ವಿವಾಹ ವಾರ್ಷಿಕೋತ್ಸವ ಆಚರಿಸಿ ತೆರಳಿದ್ದರು.

ಈ ಮೊದಲು ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದ ಅವರ ಅಣ್ಣ ಎಲ್ವಿ, ಈಚೆಗೆ ಹೊನ್ನಾವರದಲ್ಲಿ ನೆಲೆಸಿದ್ದಾರೆ. ಹೀಗಾಗಿ ಕುಟುಂಬಕ್ಕೆ ಪ್ಯಾಟ್ಸನ್‌ ಅವರ ಬಾಣಸಿಗ ವೃತ್ತಿಯಲ್ಲಿ ಸಿಗುವ ವೇತನವೇ ಪ್ರಮುಖ ಆದಾಯ ಮೂಲವಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಪ್ಯಾಟ್ಸನ್‌ ಕಾಬೂಲ್‌ಗೆ ಹೋಗುವ ಮೊದಲು ಕಾರವಾರದಲ್ಲಿ ಮೋಟರ್ ವೈಂಡಿಂಗ್ ಮಾಡುವ ವೃತ್ತಿ ಮಾಡುತ್ತಿದ್ದರು. ಬಳಿಕ ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿ ಗೋವಾದಲ್ಲಿ ಪದವಿ ಪಡೆದುಕೊಂಡರು. ಅವರ ಜತೆಗೆ ಕಾರವಾರ ತಾಲ್ಲೂಕಿನ ಹೊಟೆಗಾಳಿ ಎಂಬ ಗ್ರಾಮದವರೂ ಕೆಲಸ ಮಾಡುತ್ತಿದ್ದಾರೆಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

‘ಅಧಿಕೃತ ಮಾಹಿತಿ ಬಂದಿಲ್ಲ’
‘ಕಾರವಾರದ ವ್ಯಕ್ತಿಯೊಬ್ಬರು ಕಾಬೂಲ್‌ನಲ್ಲಿ ಅಪಹರಣಗೊಂಡಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಮಾಹಿತಿ ಸಿಕ್ಕಿದ ಕೂಡಲೇ ಮುಂದಿನ ಕ್ರಮಗಳ ಬಗ್ಗೆ ಕುಟುಂಬದ ಸದಸ್ಯರ ಜತೆ ಚರ್ಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.