ADVERTISEMENT

ಮುಖ್ಯಮಂತ್ರಿ ಬದಲಾವಣೆ: ಡಿಕೆಶಿ ಪರ ‘ಒಕ್ಕಲಿಗರ’ ಸ್ವರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 20:06 IST
Last Updated 26 ನವೆಂಬರ್ 2025, 20:06 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಕಾಂಗ್ರೆಸ್‌ ಸರ್ಕಾರದ ನಾಯಕತ್ವಕ್ಕಾಗಿ ನಡೆಯುತ್ತಿರುವ ಹಗ್ಗ ಜಗ್ಗಾಟದಲ್ಲಿ ‘ಜಾತಿ ಕಾರ್ಡ್‌’ ಅಡಿ ಇಟ್ಟಿದೆ. ಮುಖ್ಯಮಂತ್ರಿಯಾಗಲೇಬೇಕೆಂಬ ಹಟಕ್ಕೆ ಬಿದ್ದಿರುವ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರು, ಶಾಸಕರನ್ನು ತಮ್ಮ ಸೆಳೆಯುವತ್ತ ಗಮನ ನೆಟ್ಟಿದ್ದಾರೆ. ಇಲ್ಲಿಯವರೆಗೆ ಮೌನವಾಗಿದ್ದ ಒಕ್ಕಲಿಗ ಸಮುದಾಯ ಶಿವಕುಮಾರ್ ಪರ ಧ್ವನಿ ಎತ್ತಿದೆ. ಸಮುದಾಯದ ಸ್ವಾಮೀಜಿ ತಮ್ಮ ಬೇಸರ ಹೊರಹಾಕಿದ್ದರೆ, ಒಕ್ಕಲಿಗರ ಸಂಘ ಕೂಡ ಹೋರಾಟಕ್ಕೆ ಧುಮುಕುವ ಸುಳಿವು ನೀಡಿದೆ

.................

ADVERTISEMENT

ಶಿವಕುಮಾರ್ ಸಿ.ಎಂ ಆಗಲಿ: ಚುಂಚನಗಿರಿಶ್ರೀ

ಚನ್ನರಾಯಪಟ್ಟಣ (ಹಾಸನ ಜಿಲ್ಲೆ): ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಗಬೇಕು ಎನ್ನುವ ಭಾವನೆ ನಮಗೂ ಇತ್ತು. ಪಕ್ಷಕ್ಕೆ ದುಡಿದಿರುವ ಅವರಿಗೆ ಆ ಸ್ಥಾನ ಸಿಗಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕುಂದೂರು ಮಠದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ಎರಡೂವರೆ ವರ್ಷ ಶಿವಕುಮಾರ್ ಅವರಿಗೆ ಅವಕಾಶ ಕೊಡಬೇಕು. ಪಕ್ಷನಿಷ್ಠರಾಗಿದ್ದು, ಯಾವತ್ತೂ ಪಕ್ಷ ಬಿಟ್ಟುಕೊಟ್ಟವರಲ್ಲ. ಅವರ ಅಧ್ಯಕ್ಷತೆಯಲ್ಲೇ ಚುನಾವಣೆ ನಡೆದಿದೆ. ಕಾಂಗ್ರೆಸ್‌ಗಾಗಿ ಎಷ್ಟೋ ನೋವುಗಳನ್ನು ನುಂಗಿದ್ದಾರೆ. ಅವರೀಗ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಸಮುದಾಯ ಹಾಗೂ ನಮ್ಮ ಭಾವನೆಯಾಗಿದೆ’ ಎಂದರು.

‘ಸಾವಿರಾರು ಭಕ್ತರು ನಮಗೆ ಫೋನ್ ಮಾಡುತ್ತಿದ್ದಾರೆ. ನಮ್ಮವರು ಮುಖ್ಯಮಂತ್ರಿ ಆಗುತ್ತಾರೆಂದು ಶಿವಕುಮಾರ್ ಅವರನ್ನು ಆಯ್ಕೆ ಮಾಡಿದ್ದೆವು. ಎರಡು ವರ್ಷಗಳ ನಂತರ ಆಗುತ್ತಾರೆ ಅಂದುಕೊಂಡಿದ್ದೆವು. ಈಗಿನ ಬೆಳವಣಿಗೆ ನಮಗೆ ಬೇಸರ ತಂದಿದೆ’ ಎಂದು ಹೇಳಿದರು.

‘ಈ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡಲಿದೆ ಎನ್ನುವ ಭರವಸೆ ಇದೆ. ಅದು ಆದಷ್ಟು ಬೇಗ ಆಗಲಿ. ಶಿವಕುಮಾರ್‌ ಮೇಲೆ ದೇವರ ಆಶೀರ್ವಾದವೂ ಇದೆ. ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆಯಾಗಿದೆ ಎಂಬ ಭಾವನೆ ಜನರಲ್ಲಿ, ನಮ್ಮಲ್ಲಿದೆ. ಅದನ್ನು ಸೂಕ್ತವಾಗಿ ಬಗೆಹರಿಸಬೇಕು’ ಎಂದು ಅವರು ಪ್ರತಿಪಾದಿಸಿದರು.

‘ಅವರು ಶ್ರೀಮಠದ ಸದ್ಭಕ್ತರೇ. ಆಗೇ ಆಗುತ್ತದೆ ಎಂಬ ಭರವಸೆ ಅವರಿಗಿದೆ. ಆಗದಿದ್ದಲ್ಲಿ ಅವರು ಬಂದು ನಮ್ಮನ್ನು ಭೇಟಿಯಾಗಬಹುದು. ಆದರೆ, ಭಕ್ತ ವರ್ಗದಲ್ಲಿ ಆ ಬಗ್ಗೆ ಕೂಗಿದೆ. ಬಹಳ ಮಂದಿ ಬಂದು ಭೇಟಿಯಾಗುತ್ತಿದ್ದಾರೆ. ‘ಆಗುತ್ತಿಲ್ಲವೇಕೆ? ನಾವೂ ಎರಡೂವರೆ ವರ್ಷ ಕಾದಿದ್ದೇವೆ. ಈಗ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಏನೋ ವ್ಯತ್ಯಾಸ ಆದಂತಿದೆ. ಹೀಗಾಗಿ, ನೀವು ಆಶೀರ್ವಾದ ಮಾಡಬೇಕು’ ಎಂದು ಕೇಳುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಒಕ್ಕಲಿಗರ ಮಠ ಬೇರೆ ಬೇರೆ ಸಮುದಾಯಗಳಿಗೂ ಋಣಿಯಾಗಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿರುವ ಶಿವಕುಮಾರ್ ಹಲವು ಬಾರಿ ಮಠಕ್ಕೆ ಭೇಟಿ ಕೊಟ್ಟಿದ್ದರೂ ನಮ್ಮೊಂದಿಗೆ ಅವರು ಆ ಕುರಿತು ಮಾತನಾಡಿಲ್ಲ’ ಎಂದು ತಿಳಿಸಿದರು.

..............

‘ಒಕ್ಕಲಿಗ ನಾಯಕನೆಂದು ಎಂದೂ ಹೇಳಿಲ್ಲ. ಒಕ್ಕಲಿಗನಾಗಿ ಹುಟ್ಟಿ, ಕಾಂಗ್ರೆಸ್‌ ನಾಯಕನಾಗಿ ಬೆಳೆದಿದ್ದೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆರ್.ಅಶೋಕ ಅವರೇ ಒಕ್ಕಲಿಗ ನಾಯಕ ಪದ ತೆಗೆದುಕೊಂಡು ಬ್ಯಾಡ್ಜ್‌ ಹಾಕಿಕೊಂಡಿದ್ದಾರೆ. ಬೇಕಾದರೆ ನಾನೂ ಬ್ಯಾಡ್ಜ್‌ ಕಳುಹಿಸಿಕೊಡುತ್ತೇನೆ. ಚಕ್ರವರ್ತಿ, ಸಾಮ್ರಾಟ್‌ ಅಶೋಕ ಎನ್ನುವ ಒಳ್ಳೆಯ ಪದವಿಯೂ ಇದೆ’ ಎಂದು ವ್ಯಂಗ್ಯವಾಡಿದರು.

‘ಸದಾನಂದ ಗೌಡ ಸೇರಿದಂತೆ ಬಿಜೆಪಿಗರಿಗೆ ಜಾತಿ, ಧರ್ಮದ್ದೇ ಚಿಂತೆ’ ಎಂದು ಟೀಕಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.