ಅಮೃತಾ ಕಂತಿಮಠ
ಮುದ್ದೇಬಿಹಾಳ: ದಸರಾ ಹಬ್ಬಕ್ಕೆಂದು ಅಜ್ಜಿಯ ಮನೆಗೆ ಬಂದಿದ್ದ ಮೂರು ವರ್ಷದ ಬಾಲಕಿಯೊಬ್ಬಳು ಕಾಣೆಯಾದ ಬಗ್ಗೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಶವ ಕುಂಟೋಜಿ ಗ್ರಾಮದಲ್ಲಿಯೇ ಗುರುವಾರ ಪತ್ತೆಯಾಗಿದೆ.
ಇಲಕಲ್ ತಾಲ್ಲೂಕು ಸೋಮಲಾಪೂರ ಗ್ರಾಮದ ಮೂರು ವರ್ಷದ ಅಮೃತಾ ಮಹಾಂತೇಶ ಕಂತಿಮಠ ಮೃತಪಟ್ಟಿರುವ ದುರ್ದೈವಿ. ಸೆ.29 ರಂದು ಅಜ್ಜಿಯ ಮನೆಯಿಂದ ಈಕೆ ಕಾಣೆಯಾಗಿರುವ ಕುರಿತು ಅವರ ತಂದೆ ಮಹಾಂತೇಶ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅಪರಿಚಿತರಿಂದ ಅಪಹರಣಕ್ಕೆ ಒಳಗಾಗಿರುವ ಶಂಕೆಯ ಮೇಲೆ ದೂರು ದಾಖಲಿಸಿದ್ದರು.
ಎಲ್ಲ ಕಡೆ ಹುಡುಕಾಡಿದ ಬಳಿಕ ಕುಂಟೋಜಿ ಗ್ರಾಮದಲ್ಲಿರುವ ಅಜ್ಜಿಯ ಮನೆಯ ಹಿಂಭಾಗದಲ್ಲಿರುವ ಬಸಪ್ಪ ಮಾಮನಿ ಅವರ ಪಾಳು ಮನೆಯಲ್ಲಿ ಶವ ಪತ್ತೆಯಾಗಿದೆ.
ಈ ಕುರಿತು ದೂರು ನೀಡಿರುವ ಮೃತಳ ತಂದೆ, ‘ನನ್ನ ಪುತ್ರಿಗೆ ಪಾರಿವಾಳಗಳ ಮೇಲೆ ಅಪಾರ ಪ್ರೀತಿ ಇದ್ದು ನಮ್ಮ ಮಾವನವರ ಮನೆಯ ಮಾಳಿಗೆಯ ಮೇಲೆ ಪಾರಿವಾಳಗಳು ಬರುತ್ತಿದ್ದವು. ಅವುಗಳಿಗೆ ಕಾಳು ಹಾಕಲು ಅವಳು ಆಗಾಗ ಮನೆಯ ಮಾಳಿಗೆಯ ಮೇಲೆ ಹೋಗುತ್ತಿದ್ದಳು. ಆಗ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಆಯ ತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಆದರೂ ಸಹ ಅವಳ ಮರಣದಲ್ಲಿ ನಮಗೆ ಸಂಶಯ ಇದ್ದು ತನಿಖೆ ನಡೆಸಬೇಕು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಪಿಎಸೈ ಸಂಜಯ ತಿಪರೆಡ್ಡಿ ಭೇಟಿ ನೀಡಿದ್ದು ಬಿಎನ್‌ಎಸ್ 194(ಸಿ)ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.