ADVERTISEMENT

ಬಸ್‌ ಸೌಲಭ್ಯಗಳ ಕೊರತೆ: ಶಾಲಾ– ಕಾಲೇಜಿಗೆ ನಡೆದೇ ಹೋಗುವ ವಿದ್ಯಾರ್ಥಿಗಳು

ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳ ತೀರದ ಗೋಳು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 19:31 IST
Last Updated 3 ಸೆಪ್ಟೆಂಬರ್ 2021, 19:31 IST
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕು ಮರಪಳ್ಳಿ ಗ್ರಾಮದ ಬಾಲಕಿಯರು ಸಾರಿಗೆ ಸೌಲಭ್ಯದ ಕೊರತೆಯಿಂದ ಹಸರಗುಂಡಗಿಯ ಸರ್ಕಾರಿ ಪ್ರೌಢಶಾಲೆಗೆ ನಿತ್ಯ ನಡೆದುಕೊಂಡೆ ಹೋಗುತ್ತಾರೆ
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕು ಮರಪಳ್ಳಿ ಗ್ರಾಮದ ಬಾಲಕಿಯರು ಸಾರಿಗೆ ಸೌಲಭ್ಯದ ಕೊರತೆಯಿಂದ ಹಸರಗುಂಡಗಿಯ ಸರ್ಕಾರಿ ಪ್ರೌಢಶಾಲೆಗೆ ನಿತ್ಯ ನಡೆದುಕೊಂಡೆ ಹೋಗುತ್ತಾರೆ   

ಕಲಬುರ್ಗಿ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಕೆಲವೆಡೆ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ 3 ರಿಂದ 6 ಕಿ.ಮೀ.ವರೆಗೆ ನಡೆದುಕೊಂಡು ಹೋಗುತ್ತಿದ್ದಾರೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದ 15 ಬಾಲಕಿಯರು ಸೇರಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ 3.5 ಕಿ.ಮೀ ನಡೆದುಕೊಂಡೇ ಹಸರಗುಂಡಗಿ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಾರೆ. ಕೆಲ ಪೋಷಕರು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದರೆ, ಕೆಲವರು ಖಾಸಗಿ ವಾಹನ ಅವಲಂಬಿಸಿದ್ದಾರೆ.

‘ಮಳೆ ಇರಲಿ ಅಥವಾ ಬಿಸಿಲು ಇರಲಿ ವಿದ್ಯಾರ್ಥಿಗಳು ನಡೆದುಕೊಂಡು ಬರುವುದು ತಪ್ಪುವುದಿಲ್ಲ. ಬಸ್‌ ವ್ಯವಸ್ಥೆ ಮಾಡಿದರೆ, ಅನುಕೂಲವಾಗುತ್ತದೆ’ ಎಂದು ಪೋಷಕರು ಹೇಳುತ್ತಾರೆ. ಯಡ್ರಾಮಿ ತಾಲ್ಲೂಕಿನ ಜಂಬೇರಾಳ ಗ್ರಾಮ‌ದ ವಿದ್ಯಾರ್ಥಿಗಳು ಪ್ರತಿ ದಿನ 3.5 ಕಿ.ಮೀ. ನಡೆದು ಕಡಕೋಳ ಪ್ರೌಢಶಾಲೆಗೆ ಹೋಗುತ್ತಾರೆ.

ADVERTISEMENT

ಯಾದಗಿರಿ ತಾಲ್ಲೂಕಿನ ಯರಗೋಳ ಸಮೀಪದ ಕಂಚಗಾರಳ್ಳಿ ಗ್ರಾಮದ ವಿದ್ಯಾರ್ಥಿಗಳು ಅಲ್ಲಿಪುರ ಸರ್ಕಾರಿ ಪ್ರೌಢಶಾಲೆಗೆ ಹೋಗಲು ನಾಲ್ಕೂವರೆ ಕಿ.ಮೀ. ನಡೆಯಬೇಕು.

ಗುತ್ತಿ ಬಸವೇಶ್ವರ, ಬಮ್ಮನಹಳ್ಳಿ, ಚಿಂಚೋಳಿ, ವಂದಗನೂರ, ಯಡಿಯಾಪುರ, ಕುಡಲಗಿ ಮತ್ತು ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳು ಕೆಂಭಾವಿ ಶಾಲಾ–ಕಾಲೇಜಿಗೆ ಹೋಗಲು 2 ರಿಂದ 3 ಕಿ.ಮೀ. ನಡೆಯಲೇಬೇಕು.

‘ವಡಗೇರಾ ತಾಲ್ಲೂಕಿನ ಕೊಡಾಲ್ ಗ್ರಾಮದಿಂದ ಯಾದಗಿರಿಯ ಶಾಲಾ ಕಾಲೇಜಿಗೆ ಹೋಗಲು ಬಸ್‌ ವ್ಯವಸ್ಥೆ ಇಲ್ಲ. ಕೊಡಾಲ್ ಗ್ರಾಮದಿಂದ ಮುಖ್ಯರಸ್ತೆಗೆ ಬರಲು 5 ಕಿ.ಮೀ. ದೂರ ನಡೆಯಬೇಕು. ಅಲ್ಲಿಂದ ಯಾದಗಿರಿಗೆ ಬಸ್‌ ಹತ್ತಬೇಕು’ ಎಂದು ವಿದ್ಯಾರ್ಥಿಗಳು ಪರಿಸ್ಥಿತಿ ವಿವರಿಸುತ್ತಾರೆ.

‘ಬೀದರ್‌ ಜಿಲ್ಲೆಯ ಔರಾದ್ ತಾಲ್ಲೂಕಿನ ಏಕಲಾರ ಸರ್ಕಾರಿ ಪ್ರೌಢಶಾಲೆಗೆ ಬರಲು ತುಳಜಾಪುರ, ಬೋರಾಳ ಮತ್ತು ಬರದಾಪುರ ಗ್ರಾಮಗಳ ವಿದ್ಯಾರ್ಥಿಗಳು 7 ಕಿ.ಮೀ. ನಡೆಯುವುದು ಅನಿವಾರ್ಯ’ ಎಂದು ಔರಾದ್‌ನ ಆದರ್ಶ ವಿದ್ಯಾಲಯದ ಪ್ರಾಚಾರ್ಯ ಧುಳಪ್ಪ ಮಳೆನೂರ ಹೇಳಿದರು.

ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಗರ ಹೊರವಲಯದಲ್ಲಿ 4 ಕಿ.ಮೀ. ದೂರದಲ್ಲಿದೆ. ‘ಬಸ್ ಇರದ ಕಾರಣ 3 ವರ್ಷಗಳಿಂದ ನಡೆದುಕೊಂಡೆ ಹೋಗುತ್ತಿದ್ದೇವೆ. ಪ್ರತಿಭಟನೆ ನಡೆದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ವಿದ್ಯಾರ್ಥಿಗಳು ಸಂಕಷ್ಟ ತೋಡಿಕೊಂಡರೆ, ‘ಆ ಕಡೆ ಪ್ರಯಾಣಿಕರು ಹೆಚ್ಚು ಹೋಗುವುದಿಲ್ಲ. ಅದಕ್ಕೆ ಬಸ್ ಸೇವೆ ಕಲ್ಪಿಸಲಾಗದು’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಉತ್ತರಿಸುತ್ತಾರೆ.

‘ಚಿಟಗುಪ್ಪ ತಾಲ್ಲೂಕಿನ ಬಸಿಲಾಪುರ ಗ್ರಾಮದಿಂದ 4 ಕಿ.ಮೀ. ದೂರವಿರುವ ನಿರ್ಣಾ ಗ್ರಾಮದ‌ ಶಾಲೆಗೆ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುತ್ತಾರೆ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಓಂಕಾರ ರೆಡ್ಡಿ ಹೇಳುತ್ತಾರೆ.

ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಜಂಬೇರಾಳ ಗ್ರಾಮ‌ದ ವಿದ್ಯಾರ್ಥಿಗಳು 3.5 ಕಿ.ಮೀ. ನಡೆದು ಕಡಕೋಳ ಪ್ರೌಢಶಾಲೆಗೆ ಹೋಗುತ್ತಾರೆ.

ಸ್ಥಗಿತಗೊಂಡ ಬಸ್‌ ಸೇವೆ ಇನ್ನೂ ಆರಂಭಗೊಂಡಿಲ್ಲ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹತ್ತಿಗುಡ್ಡ ಗ್ರಾಮದ ವಿದ್ಯಾರ್ಥಿಗಳು ನಿತ್ಯ 6 ಕಿ.ಮೀ ನಡೆದೇ ತುರ್ವಿಹಾಳ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಾರೆ. ಒಂದೂವರೆ ವರ್ಷದ ಹಿಂದೆ ಕೊರೊನಾ ಲಾಕ್‌ಡೌನ್‌ನಲ್ಲಿ ಸ್ಥಗಿತಗೊಂಡ ಬಸ್‌ ಸೇವೆ ಇನ್ನೂ ಆರಂಭಗೊಂಡಿಲ್ಲ.

‘ದೇವಸುಗೂರು ಹೋಬಳಿ ವ್ಯಾಪ್ತಿಯ ಕೊರವಿಹಾಳ್, ಕೊರ್ತಕುಂದ, ಗಂಜಳ್ಳಿ, ಸಗಮಕುಂಟ, ಯರಗುಂಟ, ಕಾಡ್ಲೂರು, ರಂಗಾಪುರ ಮತ್ತು ಕರೇಕಲ್ ಗ್ರಾಮಗಳ ವಿದ್ಯಾರ್ಥಿಗಳು ದೇವಸುಗೂರು ಗ್ರಾಮದ ಪ್ರೌಢಶಾಲೆಗೆ ಹೋಗಲು ನಿತ್ಯ 5 ಕಿ.ಮೀ ನಡೆಯದೇ ವಿಧಿಯಿಲ್ಲ. ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ’ ಎಂದು ಕೊರವಿಹಾಳ್‌ ಗ್ರಾಮಸ್ಥ ಮಲ್ಲೇಶ ಹೇಳುತ್ತಾರೆ.

ಸಿರವಾರ ತಾಲ್ಲೂಕಿನ ಕವಿತಾಳ ಹೋಬಳಿಯ ತೊಪ್ಪಲದೊಡ್ಡಿ, ಕಡ್ಡೋಣಿ ತಿಮ್ಮಾಪುರ, ಸೈದಾಪುರ ಮತ್ತು ಹುಸೇನಪುರ ಗ್ರಾಮಗಳಿಂದ ಕವಿತಾಳದ ಸರ್ಕಾರಿ ಪ್ರೌಢಶಾಲೆ ಬರುವ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಲು ಸಂಜೆವರೆಗೂ ಕಾಯಬೇಕು. ಮಧ್ಯಾಹ್ನ 1.30ಕ್ಕೆ ತರಗತಿ ಮುಗಿದರೂ ಬಸ್‌ಗಾಗಿ ಅವರು ಮಧ್ಯಾಹ್ನ 4.30ರವರೆಗೂ ಕಾಯಬೇಕು.

ಮುದಗಲ್ ಸಮೀಪದ ಕಿಲಾರಹಟ್ಟಿ, ಬೊಮ್ಮನಹಾಳ, ಬಂಡಿ ಸುಂಕಾಪುರ ಮತ್ತು ಭೋಗಾಪುರ ಗ್ರಾಮದ ವಿದ್ಯಾರ್ಥಿಗಳು 6 ಕಿ.ಮೀ ನಡೆದು ಖೈರವಾಡಗಿ ಪಿಯು ಕಾಲೇಜು ಮತ್ತು ಬಯ್ಯಾಪುರ ಪ್ರೌಢಶಾಲೆಗೆ ಹೋಗುತ್ತಾರೆ.

‘ಮುದಗಲ್ ಮತ್ತು ನಾಗರಾಳ ನಡುವೆ 3 ಕಿ.ಮೀ ಅಂತರವಿದೆ. ಆದರೆ, ಬಸ್‌ ಸೌಕರ್ಯವಿಲ್ಲ. ಅದಕ್ಕೆ 35 ಕಿ.ಮೀ ದೂರದ ಲಿಂಗಸುಗೂರು ಕಾಲೇಜಿಗೆ ಹೋಗಬೇಕಿದೆ. ಮುದಗಲ್ ಮತ್ತು ನಾಗರಾಳ ನಡುವೆ ಬಸ್ ಸೌಲಭ್ಯ ಕಲ್ಪಿಸಬೇಕು’ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಪಾಸ್‌ ಇದ್ದರೂ ಬಸ್‌ ನಿಲ್ಲಲ್ಲ!
ಕೊಪ್ಪಳ ಜಿಲ್ಲೆ ಅಳವಂಡಿ ಮತ್ತು ಹಿರೇಶಿಂದೋಗಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ವಿದ್ಯಾರ್ಥಿಗಳು 6 ಕಿ.ಮೀ ನಡೆಯಬೇಕು. ಹ್ಯಾಟಿ ಮತ್ತು ಮುಂಡರಗಿ ಗ್ರಾಮಗಳ ವಿದ್ಯಾರ್ಥಿಗಳು ಹಿರೇಶಿಂದೋಗಿಗೆ ಮತ್ತು ಮೋರನಾಳ ಗ್ರಾಮದ ವಿದ್ಯಾರ್ಥಿಗಳು ಅಳವಂಡಿಗೆ ಹೋಗುತ್ತಾರೆ.

‘ಬಸ್‌ಗಳು ಹೆಚ್ಚಿರದ ಕಾರಣ ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಇರುತ್ತದೆ. ಬಸ್ ಟಾಪ್‌ನಲ್ಲಿ ಕೂತು ಕೆಲವರು ಪ್ರಯಾಣಿಸುತ್ತಾರೆ. ವಿದ್ಯಾರ್ಥಿಗಳ ಬಳಿ ಪಾಸ್‌ ಇದ್ದರೂ ಬಸ್‌ ಹತ್ತಲು ಸಾಧ್ಯವಾಗುವುದಿಲ್ಲ. ಕೆಲ ಬಸ್‌ಗಳು ನಿಲ್ಲುವುದಿಲ್ಲ. ಹೆಚ್ಚಿನ ಬಸ್‌ ಸೌಕರ್ಯಕ್ಕಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ವಾಹನ, ಟ್ರ್ಯಾಕ್ಟರ್ ಮತ್ತು ಜೆಸಿಬಿ ವಾಹನಗಳಲ್ಲಿ ಪ್ರಯಾಣಿಸುತ್ತಾರೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಪ್ರಯಾಣಿಕರ ಕೊರತೆಯಿಂದ ಕೆಲ ಬಸ್ ಮಾರ್ಗಗಳನ್ನು ಬಂದ್ ಮಾಡಲಾಗಿದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಗ್ರಾಮೀಣ ಭಾಗದ ಮತ್ತು ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ರಸ್ತೆಗಳೂ ಹದಗೆಟ್ಟಿವೆ.

*
ಸೋಂಕು ಕಡಿಮೆ ಆಗಿರುವುದರಿಂದ ಎಲ್ಲ ಕಡೆ ಸಾರಿಗೆ ಸಂಚಾರ ಆರಂಭಿಸಲು ಆಯಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಲಾಗಿದೆ.
-ವಿ.ಎಚ್. ಸಂತೋಷಕುಮಾರ್ ಮುಖ್ಯ ಸಂಚಾರ ವ್ಯವಸ್ಥಾಪಕ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.