ADVERTISEMENT

ಚಿತ್ರದುರ್ಗ: ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:47 IST
Last Updated 19 ಆಗಸ್ಟ್ 2020, 16:47 IST
ಹಲ್ಲೆಗೆ ಒಳಗಾಗಿರುವ ಯುವಕರು
ಹಲ್ಲೆಗೆ ಒಳಗಾಗಿರುವ ಯುವಕರು   

ಚಿತ್ರದುರ್ಗ: ತಾಲ್ಲೂಕಿನ ಅಡವಿ ಗೊಲ್ಲರಹಳ್ಳಿಗೆ ಬಂದಿದ್ದ ನಾಲ್ವರು ಅಪರಿಚಿತ ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಲ್ಲೆ ಪ್ರಕರಣ ಜಾತಿ ಆಯಾಮ ಪಡೆದುಕೊಂಡಿದ್ದು, ಭರಮಸಾಗರ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ. ದಲಿತರ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಿಸುವಂತೆ ಯುವಕರು ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಚೋಳಗುಡ್ಡ ನಿವಾಸಿ ಜಯಸೂರ್ಯ, ಹೊಳಲ್ಕೆರೆ ತಾಲ್ಲೂಕಿನ ಎಚ್.ಡಿ.ಪುರ ನಿವಾಸಿ ಮಾರುತಿ ಹಾಗೂ ಶರತ್ ಹಲ್ಲೆಗೆ ಒಳಗಾದವರು.

ADVERTISEMENT

'ಮಾರ್ಗ ಮಧ್ಯೆ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದ್ದರಿಂದ ಬೈಕ್ ಅಡ್ಡ ಹಾಕಿ ಇಂಧನ ನೀಡುವಂತೆ ಮನವಿ ಮಾಡಿದ್ದೆವು. ಇದರಿಂದ ಕುಪಿತರಾದ ಗೊಲ್ಲರಹಳ್ಳಿ ಜನರು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ' ಎಂದು ಯುವಕರು ಆರೋಪಿಸಿದ್ದಾರೆ.

ಆರೋಪ ಸಂಪೂರ್ಣ ಸುಳ್ಳು

ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಗೆ ಜಾತಿ ಆಯಾಮ ನೀಡಿ ತಿರುಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.

ಗ್ರಾಮದ ರಾಟೆ ಮಲ್ಲಪ್ಪ ಹಾಗೂ ಶಿವಕುಮಾರ್ ಎಂಬುವರ ನಡುವೆ ಒಂದೂವರೆ ಗುಂಟೆ ಜಾಗಕ್ಕೆ ಭೂವ್ಯಾಜ್ಯ ನಡೆದಿತ್ತು. ರಾಟೆ ಮಲ್ಲಪ್ಪನ ಪರವಾಗಿ ನಾಲ್ವರು ಯುವಕರು ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಗ್ರಾಮದಲ್ಲಿ ಗಲಾಟೆ ನಡೆದು ಮೂವರನ್ನು ಜನರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದರು ಎಂದು ಮಾಹಿತಿ ನೀಡಿದ್ದಾರೆ.

ದರ್ಶನ್ ಎಂಬ ಮತ್ತೊಬ್ಬ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೂವರು ಯುವಕರನ್ನು ಪೊಲೀಸರು ರಕ್ಷಿಸಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಪ್ರಕಾರಣದ ನೈಜತೆ ಗೊತ್ತಾಗಿತ್ತು. ಯುವಕರ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಜಾತಿ ಆಯಾಮ ನೀಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.