
ಕಲಬುರಗಿ: ರಾಜ್ಯದ ಗಮನ ಸೆಳೆದಿರುವ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್ 13ರ ತನಕ ಕಾಲಾವಕಾಶ ನೀಡಿದ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠ, ವಿಚಾರಣೆಯನ್ನು ನ.13.ರ ಮಧ್ಯಾಹ್ನಕ್ಕೆ ಮುಂದೂಡಿತು.
ಬೆಂಗಳೂರಿನಲ್ಲಿ ನ.5ರಂದು ಎರಡನೇ ಸುತ್ತಿನ ಶಾಂತಿ ಸಭೆಯ ಬಳಿಕ ನಿಗದಿಯಂತೆ ಶುಕ್ರವಾರ ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್, ಆರ್.ಎಸ್.ಎಸ್ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರ ವಾದ- ಪ್ರತಿವಾದ ಆಲಿಸಿದರು.
ವಾದ ಆರಂಭಿಸಿದ ಅರ್ಜಿದಾರರ ಪರ ವಕೀಲ ಅರುಣ ಶ್ಯಾಮ್, ಬೆಂಗಳೂರಿನಲ್ಲಿ ನಡೆದ ಶಾಂತಿಸಭೆಯು ಶಾಂತಿಯುತ ಹಾಗೂ ಫಲಪ್ರದವಾಗಿತ್ತು. ಸಭೆಯಲ್ಲಿ ನಾವು ಎರಡು ದಿನಾಂಕಗಳೊಂದಿಗೆ ಪರಿಷ್ಕೃತ ಪ್ರಸ್ತಾವ ಮುಂದಿಟ್ಟಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯೆಯಾಗಿ ವಾದಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅರ್ಜಿದಾರರ ಪರ ವಕೀಲರು ಹೇಳಿದಂತೆ ಶಾಂತಿ ಸಭೆ ಫಲಪ್ರದವಾಗಿತ್ತು. ಈ ಸಂಬಂಧ ಆರ್ ಎಸ್ ಎಸ್ ಸೇರಿದಂತೆ ಎಲ್ಲಾ 11 ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡುವ ಬಗೆಗೆ ಸಕಾರಾತ್ಮಕ ಕೈಗೊಳ್ಳಲು ಒಂದು ವಾರದ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ನ್ಯಾಯಾಲಯವು, ' ನಮ್ಮ ಮುಂದೆ ಅವೆಲ್ಲ ಅರ್ಜಿಗಳು ಬಂದಿಲ್ಲವಲ್ಲ' ಎಂದಿತು.
ಅದಕ್ಕೆ ಶಶಿಕಿರಣ ಶೆಟ್ಟಿ, ಶಾಂತಿಸಭೆಯಲ್ಲಿ ಹಲವು ಸಂಘಟನೆಗಳು ಪಾಲ್ಗೊಂಡಿದ್ದವು. ಆರ್.ಎಸ್.ಎಸ್ ಸೇರಿದಂತೆ ಎಲ್ಲ ಅರ್ಜಿದಾರರಿಗೆ ಒಂದು ಸಲಕ್ಕೆ ಸೀಮಿತವಾಗಿ ಅವಕಾಶ ಮಾಡಿಕೊಡಲು ಸರ್ಕಾರ ಯತ್ನಿಸುತ್ತಿದೆ. ಅದಕ್ಕೆ ಒಂದು ವಾರದ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿಗಳ ಬಗೆಗೆ ನಿಲುವು ವ್ಯಕ್ತಪಡಿಸಲು ಸರ್ಕಾರಕ್ಕೆ ನ.13ರ ತನಕ ಕಾಲಾವಕಾಶ ನೀಡಿ, ವಿಚಾರಣೆಯನ್ನು ನ.13ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.