ADVERTISEMENT

Christmas 2022 | ಮಡಂತ್ಯಾರು: ಗ್ರಾಮಜೀವನದ ಸೌಹಾರ್ದ ಗೋದಲಿ

ಮಾಲಾಡಿಯ ಮಡಂತ್ಯಾರು ಪಟ್ಟಣದಲ್ಲಿ ಹಿಂದೂ–ಮುಸ್ಲಿಮರಿಂದ ಕ್ರೈಸ್ತ ಗೆಳೆಯನ ಮನೆಯಲ್ಲಿ ಸಂಭ್ರಮಾಚರಣೆ

ವಿಕ್ರಂ ಕಾಂತಿಕೆರೆ
Published 24 ಡಿಸೆಂಬರ್ 2022, 22:15 IST
Last Updated 24 ಡಿಸೆಂಬರ್ 2022, 22:15 IST
ಸೌಹಾರ್ದ ಗೋದಲಿಯ ಒಂದು ಭಾಗ
ಸೌಹಾರ್ದ ಗೋದಲಿಯ ಒಂದು ಭಾಗ   

ಮಂಗಳೂರು: ಹಸು–ಕರು, ಮೊಲ–ಪಾರಿವಾಳ, ಕೋಳಿಗಳ ನಡುವೆ ಬಾಲ ಏಸುವಿನ ಜನನ ಸಾರುವ ಈ ಗೋದಲಿ ಈಗ ಊರಿನ ವಿಶೇಷ ಆಕರ್ಷಣೆ. 200 ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಈ ಗೋದಲಿ ಸೌಹಾರ್ದ ಸಂದೇಶದ ವಿಶ್ವದರ್ಶನ ಮಾಡಿಸುತ್ತಿದೆ.

ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಪಟ್ಟಣ ಮಡಂತ್ಯಾರು. ಇಲ್ಲಿ ಗುಂಪು ಮನೆಗಳಲ್ಲಿ ವಾಸಿಸುತ್ತಿರುವ ಹಿಂದೂ– ಮುಸ್ಲಿಮರು ಒಳಗೊಂಡ 12 ಮಂದಿ ಕೂಲಿ ಕಾರ್ಮಿಕರು ಕ್ರೈಸ್ತ ಸಮುದಾಯದ ಗೆಳೆಯನ ಮನೆಯಲ್ಲಿ ಗೋದಲಿ ನಿರ್ಮಿಸಿ ಕ್ರಿಸ್‌ಮಸ್ ಸಂಭ್ರಮಕ್ಕೆ ಮೆರುಗು ತುಂಬಿದ್ದಾರೆ.

ಗ್ರಾಮದ ಜೊಯೆಲ್ ಮೆಂಡೋನ್ಸ ಅವರ ಮನೆಯ ವಿಶಾಲ ಆವರಣದಲ್ಲಿ ನಿರ್ಮಿಸಿರುವ ಗೋದಲಿ ಸಹಜ ಸೌಂದರ್ಯದಿಂದ ಕೂಡಿದೆ. ತೆಂಗು ಮತ್ತು ಕಂಗಿನ ಗರಿಗಳನ್ನು ಬಳಸಿಕೊಂಡು ನಿರ್ಮಿಸಿರುವ, ಹುಲ್ಲು ಹಾಸಿನ ಹಟ್ಟಿಯಲ್ಲಿ ಹಸು ಮತ್ತು ಕರುವನ್ನು ಕಟ್ಟಿ ಹಾಕಿದ್ದಾರೆ. ಮೊಲ, ಪಾರಿವಾಳ ಇತ್ಯಾದಿಗಳನ್ನು ಇರಿಸಿ ಇನ್ನಷ್ಟು ಸಹಜತೆಯನ್ನು ಹೆಚ್ಚಿಸಿದ್ದಾರೆ. ಒಂದು ಭಾಗದಲ್ಲಿ ಗಿಡಗಳನ್ನು ಬೆಳೆಸಿ ಉದ್ಯಾನವನ್ನು ಮಾಡಿದ್ದು ಅದರಲ್ಲಿ ಗುಡಿಸಲು, ಎತ್ತಿನ ಗಾಡಿಗಳ ಮಾದರಿಗಳನ್ನು ಇರಿಸಿದ್ದಾರೆ.

ADVERTISEMENT

ಗೋದಲಿಯ ಕೆಲಸ ಹತ್ತು ದಿನಗಳ ಹಿಂದೆಯೇ ಆರಂಭವಾಗಿತ್ತು. ಕೆಲವು ದಿನಗಳಿಂದ ಕಾಳುಗಳನ್ನು ಮೊಳಕೆ ಬರಿಸಿ ಏಸುಕ್ರಿಸ್ತನ ಜನನದ ಸನ್ನಿವೇಶ ಸೃಷ್ಟಿಸುವ ಜಾಗದಲ್ಲಿ ಇರಿಸಿದ್ದಾರೆ. ಇದೆಲ್ಲವೂ ಸೇರಿ ಗೋದಲಿ ಮತ್ತು ಸುತ್ತಲ ಪ್ರದೇಶ ಆಕರ್ಷಕವಾಗುವಂತೆ ಮಾಡಿದ್ದಾರೆ.

ದೊಡ್ಡ ಮನಸ್ಸಿನ ಕೂಲಿ ಕೆಲಸಗಾರರು

ಪ್ರವೀಣ್ ಪೂಜಾರಿ, ಸಂತೋಷ್ ಹೆಗ್ಡೆ, ಅರುಣ್, ಸೋಮಯ್ಯ, ಆಸಿಫ್‌, ಪ್ರವೀಣ್‌, ಗುರು, ಸಾಗರ್‌, ಶಿವರಾಜ್‌, ಸುಜಿತ್‌, ಶಿವರಾಜ್ ಆಚಾರ್ಯ ಮತ್ತು ಸುರೇಶ್‌ ಮಾಲಾಡಿ ಗ್ರಾಮದ ವಿವಿಧ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಬಡಗಿ, ಪೇಂಟಿಂಗ್‌, ಕಟ್ಟಡ ನಿರ್ಮಾಣ ಮುಂತಾದ ಕೆಲಸಗಳನ್ನು ಮಾಡುತ್ತಿರುವ ಇವರು ಯಾರೂ ಹೆಚ್ಚು ಓದಿದವರು ಅಲ್ಲ. ಆದರೆ ಸೌಹಾರ್ದ ಜೀವನದ ಕನಸು ಕಂಡವರು. ಅನೇಕ ವರ್ಷ ಕ್ರಿಸ್‌ಮಸ್ ಸಂದರ್ಭದಲ್ಲಿ ಗೋದಲಿಯನ್ನು ಕಂಡು, ಬಾಲಯೇಸುವಿನ ಮಹಿಮೆಯನ್ನು ಕೇಳುತ್ತ ಬೆಳೆದವರು. ಎಲ್ಲರೂ ಸೇರಿ ಒಂದೆಡೆ ಗೋದಲಿ ನಿರ್ಮಿಸಬೇಕೆಂಬ ಅವರ ಕಸನು ಈಗ ನನಸಾಗಿದೆ.

‘ವಿವಿಧ ಕಾರಣಗಳಿಂದ ಸಮಾಜ ಕಲುಷಿತಗೊಂಡಿದೆ. ಹಳ್ಳಿಯಲ್ಲಿ ಜಾತಿ–ಧರ್ಮ ಮರೆತು ಜೊತೆಯಾಗಿ ಜೀವನ ನಡೆಸುತ್ತಿದ್ದೇವೆ ಎಂಬುದನ್ನು ಸಾರುವ ಉದ್ದೇಶ ಈ ಗೋದಲಿ ನಿರ್ಮಾಣದ ಹಿಂದೆ ಇದೆ. ಒಡೆದ ಕೆಲವು ಮನಸ್ಸುಗಳಾದರೂ ನಮ್ಮ ಈ ಕಾರ್ಯದಿಂದ ಒಂದಾದರೆ ನಾವೆಲ್ಲರೂ ಧನ್ಯರು’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರವೀಣ್ ಪೂಜಾರಿ ಅಭಿಪ್ರಾಯಪಟ್ಟರು.

ಒಬ್ಬಿಬ್ಬರಿಂದ ಸಾಮಾಜಿಕ ಪರಿವರ್ತನೆ ಕಷ್ಟಸಾಧ್ಯ. ನಾವೆಲ್ಲರೂ ಗುಂಪಾಗಿ ಸೌಹಾರ್ದ ಬದುಕಿನ ಕನಸು ಕಂಡವರು. ಈ ಕಾರ್ಯದಿಂದ ಕನಿಷ್ಟಪಕ್ಷ ನಮ್ಮ ಮಕ್ಕಳಲ್ಲಾದರೂ ಬದಲಾವಣೆ ಕಂಡುಬಂದರೆ ಸಾಮಾಜಿಕವಾಗಿ ದೊಡ್ಡ ಕೊಡುಗೆಯಾಗಬಹುದು.
–ಪ್ರವೀಣ್ ಪೂಜಾರಿ, ಮಾಲಾಡಿ ಗ್ರಾಮದ ನಿವಾಸಿ

ಸಮಾನತೆಯ ಸಂದೇಶ ಸಾರಿದವರು ಏಸುಕ್ರಿಸ್ತ. ಸೌಹಾರ್ದ ಜೀವನದ ಕನಸು ನನಸು ಮಾಡಲು ಕ್ರಿಸ್‌ಮಸ್‌ ಅತ್ಯಂತ ಸೂಕ್ತ ಸಂದರ್ಭ. ಎಲ್ಲ ಧರ್ಮದವರು ಸೇರಿ ಗೋದಲಿ ನಿರ್ಮಿಸಿರುವುದು ಹಬ್ಬದ ಸಂಭ್ರಮವನ್ನು ನೂರ್ಮಡಿಗೊಳಿಸಿದೆ.‌
–ಜೋಯೆಲ್ ಮೆಂಡೋನ್ಸ, ಮಡಂತ್ಯಾರ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.