ಸಿ.ಜೆ.ರಾಯ್
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರು ತಮ್ಮ ಡೈರಿಯಲ್ಲಿ ಕೆಲವು ರಾಜಕಾರಣಿಗಳು, ಸಿನಿಮಾ ಕ್ಷೇತ್ರದ ಗಣ್ಯರು, ಮಾಡೆಲ್ಗಳು ಹಾಗೂ ನಟ–ನಟಿಯರ ಹೆಸರುಗಳನ್ನು ಬರೆದಿದ್ದಾರೆ.
ರಾಯ್ ಅವರು ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸುವುದಕ್ಕೂ ಮುನ್ನ ಅಶೋಕನಗರ ಠಾಣೆಯ ಪೊಲೀಸರು, ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ, ಮಾಹಿತಿ ಕಲೆಹಾಕಿದ್ದರು. ರಾಯ್ ಅವರ ಕಚೇರಿಯಲ್ಲಿದ್ದ ಎರಡು ಐ–ಫೋನ್, ಲ್ಯಾಪ್ಟಾಪ್ ಹಾಗೂ ಡೈರಿಯನ್ನು ಜಪ್ತಿ ಮಾಡಿಕೊಂಡಿದ್ದರು. ರಾಯ್ ಅವರಿಗೆ ಡೈರಿ ಬರೆಯುವ ಅಭ್ಯಾಸವಿತ್ತು. ಆ ಡೈರಿಯಲ್ಲಿ ಕೇರಳ, ಕರ್ನಾಟಕದ ಕೆಲವು ಗಣ್ಯರ ಹೆಸರು ಬರೆದಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
‘ಡೈರಿಯಲ್ಲಿ ಪಟ್ಟಿ ಮಾಡಿರುವ ಹೆಸರುಗಳನ್ನು ಯಾವ ಉದ್ದೇಶದಿಂದ ಬರೆಯಲಾಗಿತ್ತು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ರಾಯ್ ಅವರು ತಮ್ಮ ಉದ್ಯಮದ ಭಾಗವಾಗಿ ಆಯೋಜಿಸುತ್ತಿದ್ದ ಹಲವು ಕಾರ್ಯಕ್ರಮಗಳಿಗೆ ನಟ, ನಟಿಯರು ಹಾಗೂ ಮಾಡೆಲ್ಗಳನ್ನು ಆಹ್ವಾನಿಸುತ್ತಿದ್ದರು. ಇವೆಂಟ್ ಮ್ಯಾನೇಜ್ಮೆಂಟ್ ಆಯೋಜನೆಗೆ ಗಣ್ಯರ ಹೆಸರು ಪಟ್ಟಿ ಮಾಡಲಾಗಿತ್ತೇ ಅಥವಾ ರಿಯಲ್ ಎಸ್ಟೇಟ್ನಲ್ಲಿ ವ್ಯವಹಾರಿಕ ನಂಟು ಹೊಂದಲಾಗಿತ್ತೇ ಎಂಬುದನ್ನು ಪರಿಶೀಲಿಸಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಸಿ.ಜೆ.ರಾಯ್ಗೆ ಯಾವುದೇ ಬೆದರಿಕೆ ಕರೆಗಳು ಬಂದಿರಲಿಲ್ಲ. ಶತ್ರುಗಳೂ ಇರಲಿಲ್ಲ. ಉದ್ಯಮಕ್ಕೆ ಸಾಲವನ್ನೂ ಪಡೆದಿರಲಿಲ್ಲ. ಐ.ಟಿ ಅಧಿಕಾರಿಗಳ ಒತ್ತಡದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು- ಸಿ.ಜೆ.ಬಾಬು, ರಾಯ್ ಸಹೋದರ
‘ರಾಯ್ ಅವರು ತಮ್ಮ ಎರಡು ಐ–ಫೋನ್ಗಳಿಗೂ ಪಾಸ್ವರ್ಡ್ ಹಾಕಿದ್ದಾರೆ. ಐ– ಫೋನ್ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊನೆಯ ಬಾರಿಗೆ ಯಾರ ಜತೆಗೆ ಫೋನ್ನಲ್ಲಿ ಮಾತನಾಡಿದ್ದರು? ಏನು ಮಾತುಕತೆ ನಡೆದಿತ್ತು ಎಂಬುದನ್ನೂ ಪರಿಶೀಲಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಇಬ್ಬರ ಹೇಳಿಕೆ ದಾಖಲು:
‘ಸಿ.ಜೆ.ಬಾಬು ಹಾಗೂ ರಾಯ್ ಅವರ ಪುತ್ರ ರೋಹಿತ್ ಅವರಿಂದ ಅಶೋಕನಗರ ಠಾಣೆಯ ಪೊಲೀಸರು ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಐ.ಟಿ ಅಧಿಕಾರಿಗಳು ಯಾವ ವಿಚಾರವಾಗಿ ದಾಳಿ ಮಾಡಿದ್ದರು? ಐ.ಟಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬುದಾಗಿ ರಾಯ್ ತಮ್ಮ ಬಳಿ ಹೇಳಿಕೊಂಡಿದ್ದರೆ ಎಂದು ಪ್ರಶ್ನೆ ಕೇಳಿ ಮಾಹಿತಿ ಪಡೆಯಲಾಗಿದೆ. ಅಂತ್ಯಸಂಸ್ಕಾರ ಮುಗಿದ ಮೇಲೆ ಎಸ್ಐಟಿ ಅಧಿಕಾರಿಗಳು ವಿವರವಾದ ಹೇಳಿಕೆ ದಾಖಲಿಸಿ ಕೊಳ್ಳಲಿದ್ದಾರೆ ’ ಎಂದು ತನಿಖಾ ಮೂಲಗಳು ಹೇಳಿವೆ.
ಹೋಟೆಲ್ನಲ್ಲೂ ಪರಿಶೀಲನೆ:
ಹಲಸೂರಿನ ಸೋಮೇಶ್ವರಪುರದ ಕಾನ್ರಾಡ್ ಹೋಟೆಲ್ನ 24ನೇ ಮಹಡಿಯ ಕೊಠಡಿಯಲ್ಲಿ ಗುರುವಾರ ರಾತ್ರಿ ರಾಯ್ ಅವರು ವಾಸ್ತವ್ಯ ಮಾಡಿದ್ದರು. ಆ ಕೊಠಡಿಯಲ್ಲೂ ಪರಿಶೀಲನೆ ನಡೆಸಲಾಗಿದೆ. ಹೋಟೆಲ್ನಲ್ಲಿ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಐ.ಟಿ ಅಧಿಕಾರಿಗಳು ಕಚೇರಿಯ ಮೇಲೆ ದಾಳಿ ನಡೆಸಿರುವ ಮಾಹಿತಿ ತಿಳಿದು, ರಾಯ್ ಅವರು ಅದೇ ಹೋಟೆಲ್ನಿಂದ ನೇರವಾಗಿ ಕಚೇರಿಗೆ ಬಂದಿದ್ದರು ಎಂದು ಮೂಲಗಳು ಹೇಳಿವೆ.
‘ಕಚೇರಿಯಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ಯಾವುದೇ ದೃಶ್ಯಾವಳಿಗಳು ಸಿಕ್ಕಿಲ್ಲ. ಯಾವ ಕಾರಣದಿಂದ ಕ್ಯಾಮೆರಾ ಆಫ್ ಮಾಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ರಾಯ್ ಒಡೆತನದ ಗ್ರೂಪ್ ಮೇಲೆ ಕಳೆದ ಡಿಸೆಂಬರ್ನಲ್ಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ವೇಳೆ ಸಿ.ಜೆ.ರಾಯ್ ಅವರ ಬಳಿ ಪರವಾನಗಿ ಪಡೆದ ಪಿಸ್ತೂಲ್ ಇದ್ದರೂ ಅದನ್ನು ವಶಪಡಿಸಿಕೊಂಡಿರಲಿಲ್ಲ. ಕಾನೂನು ಪ್ರಕಾರ, ದಾಳಿ ವೇಳೆ ಪರವಾನಗಿ ಪಡೆದು ಶಸ್ತ್ರಾಸ್ತ್ರಗಳನ್ನು ತಾತ್ಕಾಲಿಕವಾಗಿ ವಶಪಡಿಸಿಕೊಂಡು, ಸ್ಥಳೀಯ ಪೊಲೀಸರ ಸುಪರ್ದಿಗೆ ಒಪ್ಪಿಸಬೇಕು. ಆದರೆ, ಕಳೆದ ಎರಡೂವರೆ ತಿಂಗಳ ಅವಧಿಯಲ್ಲಿ ರಾಯ್ ಅವರ ಕಚೇರಿ ಮೇಲೆ ಎರಡು ಬಾರಿ ಐ.ಟಿ ದಾಳಿ ನಡೆದಿದ್ದರೂ, ಪಿಸ್ತೂಲ್ ವಶಕ್ಕೆ ಪಡೆದಿರಲಿಲ್ಲ. ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.
ಅಂತ್ಯಕ್ರಿಯೆ ಇಂದು
ಅಂತ್ಯಕ್ರಿಯೆಯನ್ನು ಭಾನುವಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯ ಶವಾಗಾರದಿಂದ ಮೃತದೇಹವನ್ನು ಬನ್ನೇರುಘಟ್ಟ ರಸ್ತೆಯ ನೇಚರ್ಸ್ ಲಕ್ಸುರಿ ರೆಸಾರ್ಟ್ ಆವರಣಕ್ಕೆ ಕೊಂಡೊಯ್ದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಹೊಸೂರು ರಸ್ತೆಯಲ್ಲಿರುವ ಚರ್ಚ್ಗೆ ಮೃತದೇಹ ಕೊಂಡೊಯ್ಯಲಾಗುವುದು. ನಂತರ ನೇಚರ್ಸ್ ಲಕ್ಸುರಿ ರೆಸಾರ್ಟ್ ಆವರಣಕ್ಕೆ ಮೃತದೇಹ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಎದೆಯ ಭಾಗಕ್ಕೆ ಹೊಕ್ಕಿದ್ದ ಗುಂಡು
‘ಗುಂಡಿನ ಗಾಯಗಳಿಂದ ರಾಯ್ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ವೇಳೆ ಗೊತ್ತಾಗಿದೆ. ದೇಹದಲ್ಲಿದ್ದ ಒಂದು ಗುಂಡು ಹೊರಕ್ಕೆ ತೆಗೆಯಲಾಗಿದೆ. ಹೃದಯ ಶ್ವಾಸಕೋಶವನ್ನು ಗುಂಡು ಸೀಳುಕೊಂಡು ಹೋಗಿತ್ತು. ಗುಂಡು ಹೊರಕ್ಕೆ ಹೋದ ಗಾಯ ಇಲ್ಲ. 6.35 ಎಂಎಂ ಬುಲೆಟ್ ಇದಾಗಿದೆ. ಪಿಸ್ತೂಲ್ ಹಿಡಿದಿದ್ದ ಬೆರಳಿನ ಮಾದರಿ ರಕ್ತದ ಮಾದರಿ ಪಡೆದು ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ’ ಎಂದು ಬೌರಿಂಗ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎನ್.ಅರವಿಂದ್ ಮಾಹಿತಿ ನೀಡಿದರು.
ದೂರಿನಲ್ಲಿ ಏನಿದೆ?
‘ಕಾನ್ಫಿಡೆಂಟ್ ಗ್ರೂಪ್’ನ ಕೇರಳ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್ ಅವರು ನೀಡಿದ ದೂರಿನ ಮೇರೆಗೆ ಅಶೋಕ ನಗರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಸಿ.ಜೆ.ರಾಯ್ ಅವರು ಶುಕ್ರವಾರ ಮಧ್ಯಾಹ್ನ 3ರ ಸುಮಾರಿಗೆ ನನ್ನ ಜತೆಗೆ ಕಾರಿನಲ್ಲಿ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಕಚೇರಿಗೆ ಬಂದಿದ್ದರು. ಕಚೇರಿಯಲ್ಲಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಎದುರು ಹೇಳಿಕೆ ದಾಖಲಿಸಿ ಬಳಿಕ ತಮ್ಮ ಕ್ಯಾಬಿನ್ಗೆ ತೆರಳಿದ್ದರು. ತಾಯಿಯ ಜತೆಗೆ ಮಾತನಾಡಬೇಕು ಎಂದು ಹೇಳಿ ನನ್ನನ್ನು ಹೊರಕ್ಕೆ ಕಳುಹಿಸಿದ್ದರು. ಹತ್ತು ನಿಮಿಷ ಕಳೆದ ಮೇಲೆ ಮತ್ತೆ ಕ್ಯಾಬಿನ್ಗೆ ಹೋಗಲು ವಾಪಸ್ ಬಂದೆ. ಆಗ ಯಾರನ್ನೂ ಕ್ಯಾಬಿನ್ಗೆ ಬಿಡದಂತೆ ಸಿಬ್ಬಂದಿಗೆ ರಾಯ್ ಸೂಚಿಸಿದ್ದರು. ಮತ್ತೆ 15 ನಿಮಿಷ ಬಿಟ್ಟು ಕ್ಯಾಬಿನ್ಗೆ ಹೋಗಿ ಬಾಗಿಲು ತಟ್ಟಿದ್ದೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲು ಒಡೆದು ಪರಿಶೀಲಿಸಿದಾಗ ರಾಯ್ ಅವರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿದ್ದರು. ಶರ್ಟ್ ಮೇಲೆ ರಕ್ತವಿತ್ತು. ತಕ್ಷಣವೇ ಆಂಬುಲೆನ್ಸ್ ಕರೆಸಿದೆವು. ಎಚ್ಎಸ್ಆರ್ ಲೇಔಟ್ನ ನಾರಾಯಣ ಆಸ್ಪತ್ರೆಗೆ ಕರೆದೊಯ್ದು ಐಸಿಯುಗೆ ದಾಖಲಿಸುವ ವೇಳೆಗೆ ರಾಯ್ ಮೃತಪಟ್ಟಿದ್ದರು. ರಾಯ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯಾರ ಒತ್ತಡ ಇರಬಹುದು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಜೋಸೆಫ್ ದೂರಿನಲ್ಲಿ ಕೋರಿದ್ದಾರೆ.
ಐ.ಟಿ ಅಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸರು
‘ರಾಯ್ ಆತ್ಮಹತ್ಯೆ ಪ್ರಕರಣದ ಸಂಬಂಧ ಆದಾಯ ತೆರಿಗೆ ಇಲಾಖೆಯ ಕೇರಳದ ಅಧಿಕಾರಿಗಳಾದ ಕೃಷ್ಣಪ್ರಸಾದ್ ಹಾಗೂ ನಿತಿನ್ ಅವರಿಂದ ಮಾಹಿತಿ ಪಡೆಯಲಾಗಿದೆ. ಯಾವ ಉದ್ದೇಶದಿಂದ ದಾಳಿ ನಡೆಸಲಾಗಿತ್ತೆಂದು ಪ್ರಶ್ನೆ ಕೇಳಿ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಎಸ್ಐಟಿ ರಚನೆ ಆಗಿರುವುದರಿಂದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಿದ್ದು ನಗರ ತೊರೆಯದಂತೆ ಹೇಳಲಾಗಿದೆ. ಕೇರಳ ಐ.ಟಿ ತಂಡವು ಸದ್ಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲೇ ಇದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.