ADVERTISEMENT

ಇಳುವರಿ ಕುಸಿತ: ಈ ಬಾರಿ ಮಾವು ‘ಕಹಿ’, ತಡವಾಗಿ ಹೂಬಿಟ್ಟ ಮರಗಳು

ಮಾವಿಗೆ ಕಂಟಕವಾದ ಅಕಾಲಿಕ ಮಳೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 19:45 IST
Last Updated 24 ಮಾರ್ಚ್ 2022, 19:45 IST
ರಾಮನಗರ ತಾಲ್ಲೂಕಿನ ಕೆಂಪೇಗೌಡನದೊಡ್ಡಿಯ ತೋಟದ ಮರವೊಂದರಲ್ಲಿ ತೂಗುತ್ತಿರುವ ಮಾವು ಪ್ರಜಾವಾಣಿ ಚಿತ್ರ / ಚಂದ್ರೇಗೌಡ
ರಾಮನಗರ ತಾಲ್ಲೂಕಿನ ಕೆಂಪೇಗೌಡನದೊಡ್ಡಿಯ ತೋಟದ ಮರವೊಂದರಲ್ಲಿ ತೂಗುತ್ತಿರುವ ಮಾವು ಪ್ರಜಾವಾಣಿ ಚಿತ್ರ / ಚಂದ್ರೇಗೌಡ   

ರಾಮನಗರ: ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವು ಹೂವು ಕಟ್ಟುವ ಅವಧಿ ಒಂದು ತಿಂಗಳು ಮುಂದಕ್ಕೆ ಹೋದ ಪರಿಣಾಮ ಈ ಬಾರಿ ಮಾವಿನ ಇಳುವರಿ ಅರ್ಧದಷ್ಟು ಕುಸಿಯಲಿದ್ದು, ಮಾರುಕಟ್ಟೆ ಪ್ರವೇಶಿಸುವುದೂ ತಡವಾಗಲಿದೆ.

ತೇವಾಂಶದಿಂದಾಗಿ ಮರಗಳು ತಡವಾಗಿ ಹೂ ಬಿಟ್ಟರೂ ಬಿಸಿಲು, ಗಾಳಿಗೆ ಅರ್ಧದಷ್ಟು ಉದುರಿ ಹೋದವು. ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಕಟ್ಟಲಿಲ್ಲ. ಕಟ್ಟಿದ ಕಾಯಿ ಮರದಲ್ಲಿ ನಿಲ್ಲಲಿಲ್ಲ. ಇಳುವರಿ ಕುಂಠಿತದಿಂದ ಸಹಜವಾಗಿ ಮಾವು ಈ ಬಾರಿ ದುಬಾರಿಯಾಗಲಿದೆ!

ರಾಜ್ಯದಲ್ಲಿಈ ವರ್ಷ 1.6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಇಳಿ ಹಂಗಾಮಿನ ಕಾರಣ ಸರಾಸರಿ ಶೇ 20–25ರಷ್ಟು ಇಳುವರಿ ಮಾತ್ರ ಸಿಗಲಿದೆ. ರಾಜ್ಯದಲ್ಲಿ ವಾರ್ಷಿಕ ಮಾವು ಉತ್ಪಾದನೆ ಸರಾಸರಿ 12–15 ಲಕ್ಷ ಟನ್‌ಗೆ ಪ್ರತಿಯಾಗಿ ಈ ವರ್ಷ 5–6 ಲಕ್ಷ ಟನ್‌ ಉತ್ಪನ್ನ ಮಾತ್ರ ದೊರೆಯುವ ನಿರೀಕ್ಷೆ ಇದೆ.

ADVERTISEMENT

ಮಾವು ಹೆಚ್ಚಾಗಿ ಬೆಳೆಯುವಹುಬ್ಬಳ್ಳಿ–ಧಾರವಾಡ, ಬೆಳಗಾವಿ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾವೇರಿ, ಮೈಸೂರು, ಮಂಡ್ಯ ಮೊದಲಾದ ಜಿಲ್ಲೆಗಳ ಪರಿಸ್ಥಿತಿ ಭಿನ್ನವಾಗಿಲ್ಲ.

‘ರಾಜ್ಯದಲ್ಲೇ ಮೊದಲು ಮಾವು ಮಾರುಕಟ್ಟೆಗೆ ಬರುವುದು ರಾಮನಗರದಿಂದ. ಹಂಗಾಮು ವಿಳಂಬವಾದ ಕಾರಣ ಏಪ್ರಿಲ್‌ ಮೊದಲ ವಾರದ ನಂತರ ಮಾರುಕಟ್ಟೆ ಪ್ರವೇಶಿಸಲಿದೆ.ಚಿಕ್ಕಬಳ್ಳಾಪುರ ಸುತ್ತಮುತ್ತ ಮರಗಳು ಹೇರಳವಾಗಿ ಹೂ ತುಂಬಿಕೊಂಡಿಲ್ಲ. ಶೇ 50ರಿಂದ 60ರಷ್ಟು ಹೀಚುಕಟ್ಟಿದ್ದು, ಫಸಲು ಕಡಿಮೆಯಾಗಲಿದೆ’ ಎನ್ನುತ್ತಾರೆಚಿಂತಾಮಣಿಯ ಮಾವು ಅಭಿವೃದ್ಧಿ ಮಂಡಳಿಯ ಉಪ ನಿರ್ದೇಶಕ ಡಿ.ಕುಮಾರಸ್ವಾಮಿ.

ಮೈಸೂರು,ಚಾಮರಾಜನಗರ, ಮಂಡ್ಯ ಜಿಲ್ಲೆಯ ಕೆಲವೆಡೆ ಮರಗಳು ಇನ್ನೂ ಹೂ ಬಿಡುತ್ತಿವೆ. ಇನ್ನೂ ಕೆಲವೆಡೆ ಕಾಯಿಯಾಗುವ ಹಂತದಲ್ಲಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರಬೇಕಿದ್ದ ತೋತಾಪುರಿ ಇನ್ನೂ ಕಾಣುತ್ತಿಲ್ಲ.

ಆಲ್ಫಾನ್ಸೊ ಮತ್ತು ಕಲ್ಮಿ ತಳಿಯ ಮಾವಿಗೆ ಹೆಸರುವಾಸಿಯಾದ ಹುಬ್ಬಳ್ಳಿ–ಧಾರವಾಡ, ಹಾವೇರಿ, ಬೆಳಗಾವಿ ಸುತ್ತಮುತ್ತ ಜನವರಿಯಲ್ಲಿ ಅರಳಿದ್ದ ಹೂವು ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ, ನಿರೀಕ್ಷೆಯಂತೆ ಕಾಯಿ ಕಟ್ಟಲಿಲ್ಲ.

‘ಈ ವರ್ಷ ಶೇ 85–90 ಮರಗಳಲ್ಲಿ ಹೂವು ಕಾಣಿಸಿಕೊಂಡಿದ್ದು, ಉತ್ತಮ ಫಸಲಿನ ನಿರೀಕ್ಷೆ ಹುಟ್ಟಿಸಿತ್ತು. ನಂತರದಲ್ಲಿ ಮರಗಳು ಮತ್ತೆ ಚಿಗುರಿದ್ದು, ಹೂವೆಲ್ಲ ಉದುರಿ ಹೋಗಿದೆ. ಬದಾಮಿ ಹೊರತುಪಡಿಸಿ ಉಳಿದ ತಳಿಯ ಮಾವಿಗೆ ಹೆಚ್ಚು ಹಾನಿಯಾಗಿದೆ. ಉತ್ಪನ್ನದ ಕೊರತೆ ಕಾರಣ ಸಹಜವಾಗಿಯೇ ಬೆಲೆ ಏರಿಕೆ ಆಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್‌.ವಿ. ಹಿತ್ತಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮರ ದತ್ತು
ರೈತರೇ ಕಟ್ಟಿಕೊಂಡ ಸಂಘ, ಉತ್ಪಾದನಾ ಕಂಪನಿಗಳು ನೇರವಾಗಿ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿವೆ. ರಾಮನಗರದ ತೆನೆ ಸಾವಯವ ಕೃಷಿಕ ಬಳಗ ‘ಮಾವಿನ ಮರ ದತ್ತು’ ಯೋಜನೆ ರೂಪಿಸಿದೆ. ₹1 ಸಾವಿರ ನೀಡಿ ಗ್ರಾಹಕರು ಇಷ್ಟದ ಮಾವಿನ ಮರವನ್ನು ದತ್ತು ಪಡೆಯಬಹುದು.

*
ನಾಲ್ಕು ವರ್ಷದಿಂದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಸರ್ಕಾರ ನೆರವಿಗೆ ಧಾವಿಸಿಲ್ಲ, ಕ್ರೇಟ್‌ ಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಶೇ 50ರಿಂದ 25ಕ್ಕೆ ಇಳಿಸಿದೆ.
-ಸಿ. ಪುಟ್ಟಸ್ವಾಮಿ, ರೈತ ಮುಖಂಡ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.