ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಟಿ ನಡೆಸಿದ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ವಿವಿಧ ವರ್ಗಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಹೊಸ ಶಿಷ್ಯ ವೇತನ ನೀಡಲು ₹1000ಕೋಟಿ ಘೋಷಣೆ ಮಾಡಬೇಕು ಎಂದು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನವನ್ನು ₹1000ದಿಂದ ₹1200ಕ್ಕೆ ಏರಿಕೆ ಮಾಡಲಾಗಿದೆ.ವಿಧವಾ ವೇತನ ₹600ರಿಂದ ₹800ಕ್ಕೆ ಏರಿಕೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಂಗವಿಕಲರ ವೇತನವನ್ನು ₹600ರಿಂದ ₹800ಕ್ಕೆ ಏರಿಕೆ ಮಾಡಲಾಗಿದೆ ಎಂದು ನೂತನ ಸಿಎಂ ತಿಳಿಸಿದರು.
ದಕ್ಷ, ಜನಪರ ಆಡಳಿತ ನನ್ನ ಸರ್ಕಾರದ ಗುರಿ. ಸಮಾಜದ ಕಟ್ಟ ಕಡೆಯ ದೀನ ದಲಿತ, ಹಿಂದುಳಿದ, ಕೂಲಿಕಾರರ ಪರವಾಗಿ ಸರ್ಕಾರ ಕೆಲಸ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
15 ದಿನಗಳಲ್ಲಿ ಎಲ್ಲ ಇಲಾಖೆಗಳ ಬಾಕಿ ಉಳಿದ ಕಡತಗಳ ವಿಲೇವಾರಿ ಮಾಡು ಕಡತ ಯಜ್ಞ ನಡೆಸಲಾಗುವುದು.ಆದೇಶ ಮಾಡುವುದು ಮಾತ್ರವಲ್ಲ ಆದೇಶದ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ. ಇಲಾಖೆಗಳ ಮಧ್ಯೆ ಸಮನ್ವಯಕ್ಕೆ ಒತ್ತು ನೀಡಲು ಕ್ರಮವಹಿಸಲಾಗುವುದು ಎಂದರು.
ಎಲ್ಲಾ ಕಾರ್ಯಕ್ರಮಗಳು ಸಮಯ ಬದ್ಧವಾಗಿ ನಡೆಯಬೇಕು. ಅಧಿಕಾರಿಗಳಲ್ಲಿ ಚಲ್ತಾ ಹೈ ಎಂಬ ಧೋರಣೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನೂ ಸಹ ನೀಡಿದರು.
ಅಲ್ಲದೇಪ್ರಧಾನಿ ನರೇಂದ್ರ ಮೋದಿ ಅವರನ್ನುಭೇಟಿ ಮಾಡಿದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.