ADVERTISEMENT

ಮೇಕೆದಾಟು: ಕೇಂದ್ರದಿಂದ ಡಿಪಿಆರ್‌ಗೆ ಅನುಮೋದನೆ ದೊರೆತ ಕೂಡಲೇ ಕಾಮಗಾರಿ; ಬೊಮ್ಮಾಯಿ

ಜುಲೈ 26ರಂದು ಸುಪ್ರೀಂನಲ್ಲಿ ಅಂತಿಮ ವಿಚಾರಣೆ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 12:51 IST
Last Updated 20 ಜುಲೈ 2022, 12:51 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪತ್ನಿ ಚನ್ನಮ್ಮ ಅವರೊಂದಿಗೆ ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಮಧು ಜಿ ಮಾದೇಗೌಡ ಇದ್ದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪತ್ನಿ ಚನ್ನಮ್ಮ ಅವರೊಂದಿಗೆ ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಮಧು ಜಿ ಮಾದೇಗೌಡ ಇದ್ದರು   

ಮಂಡ್ಯ: ‘ಸುಪ್ರೀಂ ಕೋರ್ಟ್‌ನಲ್ಲಿರುವ ಮೇಕೆದಾಟು ಅರ್ಜಿಯ ಅಂತಿಮ ವಿಚಾರಣೆ ಮಂಗಳವಾರ (ಜುಲೈ 26) ನಡೆಯಲಿದೆ. ನಮ್ಮ ವಕೀಲರು ಸಮರ್ಥ ವಾದ ಮಂಡನೆ ಮಾಡಿದ್ದು ನಮಗೆ ಗೆಲುವು ದೊರೆಯುವ ವಿಶ್ವಾಸವಿದೆ. ಕೇಂದ್ರ ಸರ್ಕಾರ ಡಿಪಿಆರ್‌ಗೆ ಅನುಮೋದನೆ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಿಳಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು ‘ನದಿಯ ಕೆಳಮಟ್ಟದಲ್ಲಿ ಯಾವುದೇ ಕಾಮಗಾರಿ ನಡೆಸಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಬೇಸಿಗೆ ಅವಧಿಯಲ್ಲಿ ನೀರಿನ ಸದ್ಬಳಕೆಗೆ ಈ ಯೋಜನೆ ಸಹಾಯಕವಾಗುತ್ತದೆ. ಆದರೆ ತಮಿಳುನಾಡು ಸರ್ಕಾರ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದು ಅನಾವಶ್ಯಕವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ’ ಎಂದರು.

‘ಜುಲೈ 19ರಂದು ನಡೆದ ವಿಚಾರಣೆಯಲ್ಲಿ ನಮ್ಮ ವಕೀಲರ ತಂಡ ಎಲ್ಲಾ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ. ಮುಂದಿನ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು ನಮಗೆ ಜಯ ದೊರೆಯಲಿದೆ. ಕೇಂದ್ರ ಸರ್ಕಾರ ಕೂಡ ನಮ್ಮ ವಿಸ್ತ್ರುತ ಯೋಜನಾ ವರದಿಗೆ ಅನುಮೋದನೆ ನೀಡಲಿದೆ’ ಎಂದರು.

‘ಕಬಿನಿ ಎಡದಂಡೆ ನಾಲೆ, ಕೆಆರ್‌ಎಸ್‌ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆ ಹಾಗೂ ಹಾರಂಗಿ ಜಲಾಶಯದ ನಾಲೆಗಳ ಆಧುನೀಕರಣಕ್ಕೆ ಸರ್ಕಾರ ₹ 480 ಕೋಟಿ ಮೀಸಲಿಟ್ಟಿದೆ. ಕೆಆರ್‌ಎಸ್‌ ಜಲಾಶಯದ ಕ್ರೆಸ್ಟ್‌ ಗೇಟ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು ಈಗಾಗಲೇ 69 ಗೇಟ್‌ ಅಳವಡಿಕೆಯಾಗಿದೆ, ಇನ್ನೂ 62 ಗೇಟ್‌ಗಳ ಅಳವಡಿಕೆ ಕಾರ್ಯ ನಡೆಯಬೇಕಾಗಿದೆ’ ಎಂದರು.

ಕಾಂಗ್ರೆಸ್‌ಗೆ ಪ್ರತಿಭಟನೆಯೇ ಕಾಯಂ; ಜುಲೈ 21ರಿಂದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಅವರು ‘ಕಾಂಗ್ರೆಸ್‌ ಮುಖಂಡರಿಗೆ ಪ್ರತಿಭಟನೆಯೇ ಕಾಯಂ ಆಗಲಿದೆ, ಅವರು ಸದಾ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಅಧಿಕಾರ ಇದ್ದಾಗ, ಅಧಿಕಾರ ಇಲ್ಲದಿದ್ದಾಗಲೂ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.