
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಪ್ರಹಸನದ ಸ್ಪಷ್ಟ ಚಿತ್ರಣ ಒಂದು ತಿಂಗಳ ಒಳಗೆ ಗೊತ್ತಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕರು ವಚನ ಭ್ರಷ್ಟರಾಗಿದ್ದಾರೆ. ಸಿದ್ದರಾಮಯ್ಯ ‘ಓ.ಸಿ’ ಮುಖ್ಯಮಂತ್ರಿ ಎಂದು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತು ಆಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡುವುದಿಲ್ಲವೆಂದು ದಿಟ್ಟತನದಿಂದ ಹೇಳಿದ್ದಾರೆ. ಅಗತ್ಯ ಇಲ್ಲದಿದ್ದರೂ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ’ ಎಂದರು.
‘ಕುರ್ಚಿ ಕಿತ್ತಾಟದ ಫಲವಾಗಿ ಜನರ ಕೆಲಸಗಳು ಆಗುತ್ತಿಲ್ಲ. ಪ್ರತಿಯೊಂದು ಇಲಾಖೆಯಲ್ಲಿ ಕಮಿಷನ್ ವ್ಯವಸ್ಥೆ ಇದೆ. ಎಲ್ಲೂ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಶಾಲೆಗಳಲ್ಲಿ ಮೂಲಸೌಕರ್ಯ ಇಲ್ಲ. ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ’ ಎಂದು ದೂರಿದರು.
ಹಗಲು ದರೋಡೆ, ಬಂಧನ ಏಕಿಲ್ಲ?: ದರೋಡೆ ಮಾಡುವವರಿಗೆ ಕರ್ನಾಟಕ ಸ್ವರ್ಗವಾಗಿದೆ. ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೂ, ಅವರನ್ನು ಬಂಧಿಸಿಲ್ಲ ಏಕೆ? ಜನನಿಬಿಡ ಪ್ರದೇಶದಲ್ಲಿ ಹಗಲು ವೇಳೆಯೇ ಕೇವಲ ಏಳು ನಿಮಿಷಗಳಲ್ಲಿ ₹7 ಕೋಟಿ ದರೋಡೆಯಾಗಿದೆ. ಘಟನೆಯಿಂದ ಜನರು ಭಯಭೀತರಾಗಿದ್ದಾರೆ ಎಂದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ. ದರೋಡೆಕೋರರಿಗೆ, ಕಳ್ಳರಿಗೆ ಭಯವಿಲ್ಲವಾಗಿದೆ. ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿವೆ. ಒಂದು ಲಕ್ಷಕ್ಕೂ ಹೆಚ್ಚು ಪೊಲೀಸರಿದ್ದಾರೆ. ಒಂದು ಕಡೆ ಕಾಂಗ್ರೆಸ್‌ನಿಂದ ಹಗಲುದರೋಡೆ ನಡೆದರೆ, ಮತ್ತೊಂದು ಕಡೆ ಡಕಾಯಿತರಿಂದ ಹಗಲು ದರೋಡೆಯಾಗಿದೆ. ಇದು ಕಾಕತಾಳೀಯ’ ಎಂದು ಟೀಕಿಸಿದರು.