ADVERTISEMENT

ಮುಖ್ಯಮಂತ್ರಿ ಬಳಿ ಕಣ್ಣೀರಿಟ್ಟ ಜನರು

ಚನ್ನಪಟ್ಟಣ: ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:51 IST
Last Updated 23 ಫೆಬ್ರುವರಿ 2019, 19:51 IST
ಮುಖ್ಯಮಂತ್ರಿ ಬಳಿ ಚೈತ್ರಾ ಹಾಗೂ ಅವರ ತಾಯಿ ಮನವಿ ಮಾಡಿದರು
ಮುಖ್ಯಮಂತ್ರಿ ಬಳಿ ಚೈತ್ರಾ ಹಾಗೂ ಅವರ ತಾಯಿ ಮನವಿ ಮಾಡಿದರು   

ಚನ್ನಪಟ್ಟಣ: ಕ್ಷೇತ್ರಕ್ಕೆ ಬಂದ ಮುಖ್ಯಮಂತ್ರಿಯ ಬಳಿ ಮತದಾರರು ಬೇಡಿಕೆಗಳ ಸುರಿಮಳೆಗೈದರು. ಕೆಲವರು ಪಾದಕ್ಕೆ ನಮಿಸಿ ಕಣ್ಣೀರನ್ನು ಇಟ್ಟರು.

ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯು ಕುಮಾರಸ್ವಾಮಿಯವರ ಜನತಾ ದರ್ಶನದ ವೇದಿಕೆಯೂ ಆಯಿತು.

ತಾಲ್ಲೂಕಿನ ಮೋಳೆದೊಡ್ಡಿ ಗ್ರಾಮದ ಚೈತ್ರಾ ಎಂಬ ಅಂಗವಿಕಲೆಗೆ ಉದ್ಯೋಗ ನೀಡುವಂತೆ ಕೋರಿ ಆಕೆಯ ತಾಯಿ ಮುಖ್ಯಮಂತ್ರಿಗಳ ಪಾದದ ಬಳಿ ಕುಳಿತುಮನವಿ ಮಾಡಿದರು.

ADVERTISEMENT

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಸದಸ್ಯೆಯರು ಕುಮಾರಸ್ವಾಮಿ ಬಳಿ ಬೇಡಿಕೆಯ ಪಟ್ಟಿ ಇತ್ತರು.

ಸೇವೆ ಕಾಯಂ, ಕನಿಷ್ಠ ವೇತನ, ಹೆಚ್ಚುವರಿ ವೇತನದ ಬಿಡುಗಡೆಗೆ ಅವರು ಕೋರಿದರು. ಇನ್ನೂ ಹತ್ತಾರು ಮಂದಿ ಹೀಗೆ ಮನವಿ ಮಾಡಿದರು.

ಅಹವಾಲು ಕೇಂದ್ರ: ಕಾಲೇಜು ಆವರಣದಲ್ಲಿರುವ ಶತಮಾನೋತ್ಸವ ಭವನದ ಎದುರಿನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕೇಂದ್ರ ಹೆಸರಿನಲ್ಲಿ ಕೌಂಟರ್ ಗಳನ್ನು ತೆರೆದಿದ್ದ ಇಲಾಖೆಗಳು, ಬೆಳಿಗ್ಗೆಯಿಂದಲೇ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿಗಳನ್ನು ಸ್ವೀಕರಿಸಿ ರಶೀದಿ ನೀಡಿದರು.

ಸಾರ್ವಜನಿಕರು ಸಹ ಉತ್ಸಾಹದಿಂದ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಮುಖ್ಯಮಂತ್ರಿಗಳ ಕಾರ್ಯಕ್ರಮದ ಮುಕ್ತಾಯದ ಬಳಿಕವೂ ಅರ್ಜಿ ಸ್ವೀಕಾರ ಮುಂದುವರೆದಿತ್ತು. ಕಾರ್ಯಕ್ರಮದ ಮುಕ್ತಾಯದವರೆಗೂ ಇಲಾಖೆಗಳ ಸಿಬ್ಬಂದಿ ಹಾಜರಿದ್ದು ಅಹವಾಲು ಸ್ವೀಕರಿಸಿದರು.

‘ಸಾರ್ವಜನಿಕರು ನೀಡಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಆದ್ಯತೆ ಮೇರೆಗೆ ಅವುಗಳಿಗೆ ಪರಿಹಾರ ನೀಡಲಾಗುವುದು. ಕೆಲವು ಸಮಸ್ಯೆಗಳಿಗೆ ಸಮಯ ಬೇಕಾಗಬಹುದು. ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಅರ್ಜಿ ಸ್ವೀಕಾರ ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.