ADVERTISEMENT

ಸರ್ಕಾರದ ಅಸ್ಥಿರತೆ ನಡುವೆಯೂ ರೈತರೊಂದಿಗೆ ಸಭೆ ನಡೆಸಿದ ಸಿಎಂ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 10:54 IST
Last Updated 8 ಜುಲೈ 2019, 10:54 IST
   

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ರಾಜಕೀಯ ಅಸ್ಥಿರತೆಯ ನಡುವೆಯೂ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಸೋಮವಾರ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿದರು.

ಮಂಡ್ಯದ ಮೈಶುಗರ್‌ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಈ ಸಭೆ ನಡೆಯಿತು.

ಸಭೆಯಲ್ಲಿ ಸಕ್ಕರೆ ಸಚಿವ ಆರ್. ಬಿ. ತಿಮ್ಮಾಪುರ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮಂಡ್ಯ ಜಿಲ್ಲೆಯ ಶಾಸಕರು, ರೈತ ಮುಖಂಡರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ‘ಮೈಶುಗರ್‌ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಕುರಿತು ಚರ್ಚಿಸಲು ಕಬ್ಬು ಬೆಳೆಗಾರರೊಂದಿಗೆ ಇಂದು ನಡೆದ ಸಭೆಯು ಮೊದಲೇ ನಿಗದಿಯಾಗಿತ್ತು. ನಾನು ಅಮೆರಿಕಕ್ಕೆ ತೆರಳುವಾಗಲೇ ಕಬ್ಬು ಬೆಳೆಗಾರರಿಗೆ ತಿಳಿಸಿದ್ದೆ. ಅದರಂತೆ ಇಂದು ಸಭೆ ನಡೆಸಿ, ಚರ್ಚೆ ಮಾಡಿದ್ದೇನೆ,’ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲ ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಸಂಕಷ್ಟದಲ್ಲಿದೆ. ಅತೃಪ್ತರನ್ನು ಮನವೊಲಿಸುವ ಪ್ರಕ್ರಿಯೆಯಲ್ಲಿ ನಿರತರಾಗಿರುವ ಮುಖ್ಯಮಂತ್ರಿ, ಅದರ ನಡುವೆಯೂ ಸಭೆ ನಡೆಸಿದ್ದು, ಅಚ್ಚರಿಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.