ADVERTISEMENT

ಕಾಂಗ್ರೆಸ್‌ ಭರವಸೆ 134, ಈಡೇರಿಕೆ 9: ಸಿವಿಕ್‌ ಸಂಘಟನೆಯ ವರದಿಯಲ್ಲಿ ಉಲ್ಲೇಖ

‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್‌ ಕಾರ್ಡ್‌’ ವರದಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್   

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್‌ ಪಕ್ಷ 134 ಭರವಸೆಗಳನ್ನು ನೀಡಿತ್ತು. ಸರ್ಕಾರ ರಚಿಸಿದ ನಂತರದ ಎರಡು ವರ್ಷಗಳಲ್ಲಿ ಸಂಪೂರ್ಣವಾಗಿ ಈಡೇರಿಸಿದ್ದು ಒಂಬತ್ತು ಭರವಸೆಗಳನ್ನು ಮಾತ್ರ ಎನ್ನುತ್ತದೆ ಸಿವಿಕ್‌ ಸಂಘಟನೆಯ ‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್‌ ಕಾರ್ಡ್‌’ ವರದಿ. 

ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಿವಿಕ್‌ ಸಂಘಟನೆಯ ಟ್ರಸ್ಟಿ ಟಿ.ಆರ್‌.ರಘುನಂದನ್‌ ಅವರು, ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವರದಿ ಬಿಡುಗಡೆ ಮಾಡಿದರು. 

ಕಾಂಗ್ರೆಸ್‌ ಪಕ್ಷವು ತಾನು ನೀಡಿದ್ದ ಭರವಸೆಗಳ ಪೈಕಿ 50 ಅನ್ನು ಕಾರ್ಯರೂಪಕ್ಕೆ ತರಲು ಕ್ರಮ ತೆಗೆದುಕೊಂಡಿದೆ. ಆದರೆ 73 ಭರವಸೆಗಳ ಸಂಬಂಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು 2 ಭರವಸೆಗಳನ್ನು ತಾನೇ ಹಾಕಿಕೊಂಡಿದ್ದ ಕಾಲಮಿತಿಯಲ್ಲಿ ಈಡೇರಿಸಲು ವಿಫಲವಾಗಿದೆ ಎಂದು ವರದಿ ಉಲ್ಲೇಖಿಸಿದೆ. 

ADVERTISEMENT

ಸರ್ಕಾರವು ಈಡೇರಿಸಿರುವ ಒಂಬತ್ತು ಭರವಸೆಗಳ ಪೈಕಿ ಐದು ಗ್ಯಾರಂಟಿ ಯೋಜನೆಗಳೇ ಇವೆ. ಜತೆಗೆ ಶಾಲಾ ಪಠ್ಯಕ್ರಮ ಬದಲಾವಣೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ, ಮೆಟ್ರೊ ಮತ್ತು ಬಸ್‌ ನಿಲ್ದಾಣಗಳಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳ ಸ್ಥಾಪನೆ ಹಾಗೂ ಆಟೊ–ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ ಭರವಸೆಗಳನ್ನು ಮಾತ್ರ ಈಡೇರಿಸಿದೆ ಎನ್ನುತ್ತದೆ ವರದಿ.

‘ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬೆಂಗಳೂರು ಮೆಟ್ರೊವಿನ 2, 2ಎ, 2ಬಿ ಹಂತಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಕಾಂಗ್ರೆಸ್ ಹೇಳಿತ್ತು. ತಾನೇ ಹಾಕಿಕೊಂಡಿದ್ದ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ.  ಸರ್ಕಾರಿ ಶಾಲೆಗಳಲ್ಲಿ 62,000 ಶಿಕ್ಷಕರ ಮತ್ತು ಇತರ ಸಿಬ್ಬಂದಿ ಹುದ್ದೆ ಖಾಲಿ ಇವೆ. ಅವುಗಳಿಗೆ ನೇಮಕಾತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವರದಿ ಬೊಟ್ಟುಮಾಡಿದೆ.

‘ಡಿಸಿಎಂ ಆರ್‌ಎಸ್‌ಎಸ್‌ ಗೀತೆ: ಜಾತ್ಯತೀತತೆಗೆ ಧಕ್ಕೆ’

ಸರ್ಕಾರದ ಕಾರ್ಯವೈಖರಿ ಕುರಿತು ಸಿವಿಕ್‌ ಸಂಘಟನೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಹೀಗಿವೆ:

* ಉಪ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ ಪ್ರಾರ್ಥನೆ ಹಾಡಿದ್ದರಿಂದಾಗಿ ಜಾತ್ಯತೀತ ನಿಲುವಿಗೆ ಧಕ್ಕೆಯಾಯಿತು

*ಕಾವೇರಿ ಆರತಿಯು ಗಂಗಾ ಆರತಿಯ ಅನುಕರಣೆಯಾಗಿದ್ದು, ಅನಗತ್ಯವಾದ ಕಾರ್ಯಕ್ರಮ

* ಅನ್ನಭಾಗ್ಯ ಯೋಜನೆಯಿಂದ ಶೇ 80ರಷ್ಟು ಜನರು ಮೊದಲಿಗಿಂತಲೂ ಹೆಚ್ಚು ಪೌಷ್ಟಿಕಾಂಶಯುಕ್ತ ಮತ್ತು ಹೆಚ್ಚಿನ ಕ್ಯಾಲೊರಿಯ ಆಹಾರ ಸೇವಿಸುತ್ತಿದ್ದಾರೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. ರಾಜ್ಯದ ಆರ್ಥಿಕ ಸ್ಥಿತಿ ಬಿಗಡಾಯಿಸಿದೆ

* ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೇ ಇರುವ ಮೂಲಕ ರಾಜ್ಯ ಸರ್ಕಾರವು ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಜನಪ್ರತಿನಿಧಿಗಳು ಇಲ್ಲದೆಯೇ ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ

* ಒಳ ಮೀಸಲಾತಿ ಜಾರಿ, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆ ಓದಿಸುವ ಕಾರ್ಯಕ್ರಮ ಶ್ಲಾಘನೀಯ

* ಕಟ್ಟಡ ನಿರ್ಮಾಣ ಕಾರ್ಮಿಕರ ಸಬಲೀಕರಣಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಅನರ್ಹರು ತಾವು ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಸಿಕೊಂಡು ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ

* ಶರಾವತಿ ಪಂಪ್ಡ್‌ ಸ್ಟೋರೇಜ್‌, ಕಾಳಿ ರೈಲು ಮಾರ್ಗ, ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್, ಅವೈಜ್ಞಾನಿಕವಾಗಿ ಸೋಲಾರ್ ಪಾರ್ಕ್‌ಗಳ ಸ್ಥಾಪನೆಯಿಂದ ಪರಿಸರಕ್ಕೆ ಹಾನಿ

* ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿನ್ನಡೆ. ಧರ್ಮಸ್ಥಳದ ಅಸಹಜ ಸಾವು ಪ್ರಕರಣಗಳ ತನಿಖೆ ನಿರ್ವಹಣೆಯಲ್ಲಿ ವಿಳಂಬ. ಮಹಿಳಾ ಆಯೋಗವು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು

* ನಗರಾಭಿವೃದ್ಧಿಯಲ್ಲಿ ವಿಫಲ. ಬೆಂಗಳೂರಿಗೆ ಹೊರೆಯಾಗುವ ಮತ್ತು ಜನರಿಗೆ ಉಪಯೋಗವಿಲ್ಲದ ಯೋಜನೆಗಳಿಗೆ ಒಲವು. ಮೂಲಸೌಕರ್ಯ ನಿರ್ವಹಣೆಯಲ್ಲಿ ವಿಫಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.