ಲಕ್ಷ್ಮಿ ಹೆಬ್ಬಾಳಕರ
ಬೆಳಗಾವಿ: ‘ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಬಿಜೆಪಿ ನಾಯಕರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಮಾತುಕತೆಗೆ 10 ಮುಖಂಡರನ್ನು ಕರೆತರುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಸಿ.ಸಿ.ಪಾಟೀಲ ಸೇರಿದಂತೆ ಹಲವು ನಾಯಕರಿಗೆ ನಾನೇ ಕರೆ ಮಾಡಿದ್ದೆ, ಖುದ್ದಾಗಿ ಹೋಗಿ ಕರೆದಿದ್ದೆ. ಯಾರು ಬರಲಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಸುವರ್ಣ ವಿಧಾನಸೌಧದ ಮುಂದೆ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಮೀಸಲಾತಿ ಹೋರಾಟ ರಾಜಕೀಯ ರೂಪ ಪಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಬರಬಾರದು. ಆದರೆ, ಬಿಜೆಪಿಯವರಿಗೆ ರಾಜಕೀಯವೇ ಬೇಕಾಗಿದೆ. ಅವರ ಸರ್ಕಾರ ಇದ್ದಾಗ ಏಕೆ 2ಎ ಮೀಸಲಾತಿ ಕೊಡಲಿಲ್ಲ? ಆಗ ಮೂಗಿಗೆ ತುಪ್ಪ ಸವರಿದವರು ಈಗ ಹೋರಾಟ ಹೋರಾಟ ಮಾಡುತ್ತಿದ್ದಾರೆ’ ಎಂದರು.
‘ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲು ಕೆಲವರ ಪ್ರಚೋದನೆಯೇ ಕಾರಣ. ಇಂಥವರ ಮಾತು ಕೇಳಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ನ್ಯಾಯಾಲಯದ ಆದೇಶದಂತೆ ಕಾನೂನು ಉಲ್ಲಂಘಿಸುವುದಿಲ್ಲ ಎಂದು ಸ್ವತಃ ಪ್ರತಿಭಟನಾಕಾರರೇ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು. ಆದರೆ, ಪ್ರತಿಭಟನೆಯಲ್ಲಿ ಆಗಿದ್ದೇನು?’ ಎಂದು ಸಚಿವೆ ಪ್ರಶ್ನಿಸಿದರು.
‘ಜನರೆಲ್ಲ ಬೆಳಿಗ್ಗೆಯಿಂದ ಹೋರಾಡಿ ಹಸಿದಿದ್ದಾರೆ. ಪ್ರತಿಭಟನೆಗೆ ಇಳಿಯುವುದಕ್ಕಿಂತ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸೋಣ ಎಂದು ವಿನಂತಿಸಿದ್ದೆ. ಯಾರದೋ ಪ್ರಚೋದನೆಯಿಂದಾಗಿ ಅಮಾಯಕರು ಲಾಠಿ ಏಟು ತಿನ್ನುವಂತಾಯಿತು. ಹಿಂಸೆಗೆ ಯಾರೂ ಅವಕಾಶ ಕೊಡಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.