ಸಿದ್ದರಾಮಯ್ಯ, ಪರಮೇಶ್ವರ್, ಬಿಆರ್ ಪಾಟೀಲ, ವಿಜಯೇಂದ್ರ
ಬೆಂಗಳೂರು: ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ಜಿ. ಪರಮೇಶ್ವರ್ ಬಳಿ ಹೇಳಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಪರಮೇಶ್ವರ್ ಅವರು ಬಾದಾಮಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ಹಂಚಿಕೊಂಡು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ‘ಖಾಲಿ, ಖಾಲಿ, ಸರ್ಕಾರದ ಖಜಾನೆ ಖಾಲಿ! ಅವೈಜ್ಞಾನಿಕ ಗ್ಯಾರಂಟಿ ಯೋಜನೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ರಾಜ್ಯದ ಬೊಕ್ಕಸ ಬರಿದು ಮಾಡಿಕೊಂಡ ಸಿದ್ದರಾಮಯ್ಯ ಸರ್ಕಾರ, ಶಾಸಕರಿಗೆ ಅನುದಾನ ನೀಡಲು ನಮ್ಮ ಬಳಿ ದುಡ್ಡಿಲ್ಲ ಅಂತ ಗೃಹ ಸಚಿವರ ಮೂಲಕ ಹೇಳಿಸಿದೆ‘ ಎಂದು ವ್ಯಂಗ್ಯವಾಡಿದೆ.
ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ ಎಂದು ಆರೋಪಿಸಿದೆ.
ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ್ ಆರೋಪ ಮಾಡಿದ್ದರೆ, ಒಂದೆಡೆ ಅನುದಾನ ವಿಚಾರವಾಗಿ ಶಾಸಕ ರಾಜು ಕಾಗೆ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಒಂದು ಚರಂಡಿ ನಿರ್ಮಿಸಲು ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದ್ದರು. ಅದರ ಬೆನ್ನೆಲ್ಲೇ ಈಗ ಗೃಹ ಸಚಿವ ಪರಮೇಶ್ವರ್ ಕೂಡ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಅನುದಾನವನ್ನೂ ನೀಡದೆ ಅಭಿವೃದ್ಧಿಯನ್ನೂ ಮಾಡದೆ ರಾಜ್ಯವನ್ನು ಕತ್ತಲೆಕೂಪಕ್ಕೆ ಕಾಂಗ್ರೆಸ್ ದೂಡುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ತಮ್ಮದೇ ಸರ್ಕಾರದ ಬಗ್ಗೆ ಕಾಂಗ್ರೆಸ್ ಶಾಸಕರ ಮುನಿಸು ಬಹಿರಂಗವಾಗುತ್ತಿರುವ ಬೆನ್ನಲ್ಲೇ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಈ ಸಾಲಿಗೆ ಮತ್ತೆ ಯಾವ ಕಾಂಗ್ರೆಸ್ ಶಾಸಕರು ಸೇರುತ್ತಾರೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.