ಬೆಂಗಳೂರು: ‘ರಾಜ್ಯದಲ್ಲಿ ಗೂಂಡಾಗಿರಿ ನಡೆಸುತ್ತಿರುವ ರೌಡಿಗಳ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಮಟ್ಟ ಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರಿಗೆ ಸೂಚನೆ ನೀಡಿದರು.
ಇಲ್ಲಿನ ಕೋರಮಂಗಲದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಪದಕಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.‘ರೌಡಿ ಚಟುವಟಿಕೆಗೆ ಕಡಿವಾಣ ಹಾಕಲು ಪೊಲೀಸರಿಗೆ ಬೇಕಾದ ಎಲ್ಲ ರೀತಿಯ ನೆರವನ್ನೂ ರಾಜ್ಯ ಸರ್ಕಾರ ನೀಡಲಿದೆ. ಪೊಲೀಸರ ಬೇಡಿಕೆ ಈಡೇರಿಸಲೂ ಸರ್ಕಾರ ಸಿದ್ಧ ಇದೆ. ಸರ್ಕಾರವು ಸದಾ ಪೊಲೀಸರೊಂದಿಗೆ ಇರುತ್ತದೆ. ಆದರೆ, ಕರ್ತವ್ಯ ಲೋಪವನ್ನು ಮಾತ್ರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ಬೀಟ್ ವ್ಯವಸ್ಥೆಯನ್ನೂ ರಾಜ್ಯದಲ್ಲಿ ಇನ್ನಷ್ಟು ಪರಿಣಾಮಕಾರಿ ಆಗಿ ನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು.
‘ಜರ್ಮನಿ ದೇಶದ ಪ್ರಧಾನಿ ಹಾಗೂ ಪ್ರತಿನಿಧಿಗಳು, ರಾಜ್ಯದ ಪೊಲೀಸರ ಕೌಶಲ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖ ಆಗುತ್ತಿದೆ. ಇನ್ನಷ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು’ ಎಂದು ಹೇಳಿದರು.
‘ತಂತ್ರಜ್ಞಾನದ ಬೆಳವಣಿಗೆಯಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅದೇ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ಕಡಿಮೆ ಮಾಡಬೇಕು. ಅಲ್ಲದೇ ವಂಚಕರನ್ನೂ ಬಂಧಿಸಬೇಕು’ ಎಂದು ಸೂಚನೆ ನೀಡಿದರು.
‘ಡ್ರಗ್ಸ್ ಮುಕ್ತ ರಾಜ್ಯ ಮಾಡುವುದು ಸರ್ಕಾರದ ಗುರಿ. ಮಾದಕ ವಸ್ತು ಜಾಲವನ್ನು ಪೊಲೀಸರು ಬೇರು ಸಹಿತ ಕಿತ್ತು ಹಾಕಲು ಪಣ ತೊಡಬೇಕು’ ಎಂದು ಕರೆ ನೀಡಿದರು.
‘ಕಾನೂನು ಸುವ್ಯವಸ್ಥೆ, ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಒಂದಕ್ಕೊಂದು ನೇರ ಸಂಬಂಧ ಇದೆ. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಆಗುತ್ತಿದೆ. ಇದನ್ನು ನಿರ್ವಹಿಸಬೇಕಾದರೆ ಕಾನೂನು ಸುವ್ಯವಸ್ಥೆ , ಶಾಂತಿ ಪಾಲನೆ ಉತ್ತಮವಾಗಿರಬೇಕು’ ಎಂದು ಹೇಳಿದರು.
ಗೃಹ ಸಚಿವ ಜಿ. ಪರಮೇಶ್ವರ,ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಜರಿದ್ದರು.
ಪೊಲೀಸ್ ಇಲಾಖೆ ಮತ್ತು ಸಿಬ್ಬಂದಿಯ ಅನುಕೂಲಕ್ಕೆ ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳನ್ನೂ ಜಾರಿಗೆ ತರಲಾಗುವುದುಸಿದ್ದರಾಮಯ್ಯ ಮುಖ್ಯಮಂತ್ರಿ
ರಾಜ್ಯದಲ್ಲಿ ಡ್ರಗ್ಸ್ ಮಾರಾಟ ದಂಧೆಗೆ ಕಡಿವಾಣ ಹಾಕಬೇಕು. ಮಹಿಳೆಯರ ಸುರಕ್ಷತೆಗೆ ಪೊಲೀಸರು ಹೆಚ್ಚಿನ ಒತ್ತು ನೀಡಬೇಕುಜಿ.ಪರಮೇಶ್ವರ ಗೃಹ ಸಚಿವ
ಮೂರು ವರ್ಷದ ಪದಕ ಪ್ರದಾನ ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಮುಖ್ಯಮಂತ್ರಿ ಪದಕವನ್ನು ಬುಧವಾರ ನಡೆದ ಕಾರ್ಯಕ್ರಮದಲ್ಲಿ ಒಟ್ಟಿಗೆ ವಿತರಣೆ ಮಾಡಲಾಯಿತು. 2022 2023 ಹಾಗೂ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತರು ಹಾಗೂ ರಾಜ್ಯ ನೆರೆ ರಾಜ್ಯದ ನಕ್ಸಲರು ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಶ್ರಮಿಸಿದ ರಾಜ್ಯ ಗುಪ್ತಚರ ವಿಭಾಗ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗೂ ಇದೇ ವೇಳೆ ಸಿದ್ದರಾಮಯ್ಯ ಅವರು ಪದಕವನ್ನು ಪ್ರದಾನ ಮಾಡಿದರು. ಒಟ್ಟು 464 ಸಿಬ್ಬಂದಿಗೆ ಪದಕ ವಿತರಣೆ ಮಾಡಲಾಯಿತು. ಪದಕಗಳನ್ನು ಪಡೆದವರು ಬೇರೆಯವರಿಗೆ ಪ್ರೇರಣೆ ಆಗಬೇಕು. ಸಿ.ಎಂ ಪದಕ ಪಡೆಯಲು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.