
ಬೆಳಗಾವಿ: ಪೌರಾಡಳಿತ ಇಲಾಖೆ ಜಾರಿಗೆ ತಂದ ‘ಇ-ಖಾತಾ’ ಸೌಕರ್ಯಕ್ಕೆ ಇಲ್ಲಿನ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಇದರ ಕೈಪಿಡಿ ಕೂಡ ಬಿಡುಗಡೆ ಮಾಡಿದರು.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳು ಮತ್ತು ಮನೆಯ ಹಕ್ಕುಪತ್ರಗಳ ವಿತರಣೆಗೂ ಅವರು ಚಾಲನೆ ನೀಡಿದರು.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಮಾತನಾಡಿ, ‘ಇ–ಆಸ್ತಿ ತಂತ್ರಾಂಶ ಸರಳೀಕರಣ ಮಾಡಲಾಗಿದೆ. ಆಸ್ತಿ ಮಾಲೀಕರು ಯಾವುದೇ ಮಧ್ಯವರ್ತಿಗಳಿಲ್ಲದೇ, ಅಧಿಕಾರಿ ಸಂಪರ್ಕಿಸದೇ ತಮ್ಮ ಮನೆಯಲ್ಲಿ ಕುಳಿತು ಇ–ಖಾತಾ ಪಡೆದುಕೊಳ್ಳಬಹುದು’ ಎಂದರು.
‘ಸಾರ್ವಜನಿಕ ಸೇವೆಯಲ್ಲಿರುವ 6 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಮನೆ ನಿರ್ಮಿಸಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ 6,119 ಫಲಾನುಭವಿಗಳನ್ನು ಗುರುತಿಸಲಾಗಿದೆ. ಸರ್ಕಾರ ₹326 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈವರೆಗೆ 4,159 ಮನೆ ನಿರ್ಮಾಣ ಪೂರ್ಣಗೊಂಡಿವೆ’ ಎಂದರು.
‘ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ–ಖಾತಾ ಪ್ರಕಟಿಸಲಾಗಿದೆ. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸುತ್ತವೆ’ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಶಾಸಕ ಆಸಿಫ್ ಸೇಠ್, ಬೆಳಗಾವಿ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ ಗಿರಿನಾಥ, ಸರ್ಕಾರದ ಕಾರ್ಯದರ್ಶಿ ದೀಪ ಚೋಳನ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ಮಿಷನ್ ಡೈರೆಕ್ಟರ್ ಡಾ.ಸೆಲ್ವಮನಿ ಆರ್. ಇತರರು ಇದ್ದರು.
ಇದೇ ವೇಳೆ, ಬೆಳಗಾವಿಯ 127 ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ಪತ್ರ, ವಿಜಯಪುರದ ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶ ಪತ್ರ, ಗೃಹಭಾಗ್ಯ ಯೋಜನೆಯಡಿ 60 ಪೌರ ಕಾರ್ಮಿಕರಿಗೆ ಮನೆಯ ಸ್ವಾಧೀನ ಪ್ರಮಾಣ ಪತ್ರ ವಿತರಿಸಲಾಯಿತು.
ರಾಜ್ಯದ 320 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈವರೆಗೆ ಆಸ್ತಿ ಮಾಲೀಕರು ಇ–ಆಸ್ತಿ ತಂತ್ರಾಂಶದ ಮೂಲಕ ಅಂದಾಜು 29 ಲಕ್ಷ ಇ–ಆಸ್ತಿಗಳಿಗೆ ಇ–ಖಾತಾ ಪಡೆದಿದ್ದಾರೆ– ಬೈರತಿ ಸುರೇಶ್, ಸಚಿವ, ನಗರಾಭಿವೃದ್ಧಿ ಮತ್ತು ನಗರ ಯೋಜನೆ
ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರ ಬಗ್ಗೆ ಕಾಳಜಿ ಹೊಂದಿದ್ದಾರೆ. ಈಗಾಗಲೇ ಸಾವಿರಾರು ಫಲಾನುಭವಿಗಳಿಗೆ ಮನೆ ಕೊಡುತ್ತಿದ್ದಾರೆ. ಈಗ ಮತ್ತೆ 180 ಹೊಸ ಇಂದಿರಾ ಕ್ಯಾಂಟಿನ್ ನೀಡಿದ್ದಾರೆ– ರಹೀಂ ಖಾನ್, ಸಚಿವ, ಪೌರಾಡಳಿತ ಮತ್ತು ಹಜ್
ಸಾರ್ವಜನಿಕರ ಆಸ್ತಿ ದಾಖಲೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಇ-ಖಾತಾ ಸೇವೆ ಒದಗಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ– ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.