
ಸಿದ್ದರಾಮಯ್ಯ
ಬೆಂಗಳೂರು: ಈ ಹಿಂದೆ ಬಿಜೆಪಿ ಅವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಸಿಬಿಐ ತನಿಖೆಗೆ ಕೊಟ್ಟಿದ್ದರೆ, ಈಗ ನಮ್ಮನ್ನು ಕೇಳಬಹುದಿತ್ತು. ನಾವು ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ!
ಶ್ರೀರಾಮುಲು, ಜನಾರ್ಧನ ರೆಡ್ಡಿಯವರು ಕಾಂಗ್ರೆಸ್ ನಾಯಕರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ. ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಬರಬಾರದೆಂದು ಏಕೆ ಹೇಳಿದ್ದರು? ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರ್ತಿಸಿದವರು ಯಾರು? ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಈ ಬಗ್ಗೆ ವರದಿ ಕೊಟ್ಟಿದ್ದರು.
ಲೋಕಸಭಾ ಚುನಾವಣೆ ಪ್ರಚಾರಕ್ಕೆ ಹೋದಾಗ ಬಳ್ಳಾರಿಯಲ್ಲಿ ನಮಗೆ ಸಾರ್ವಜನಿಕ ಸಭೆ ನಡೆಸಲು ಎಲ್ಲೂ ಸ್ಥಳವನ್ನು ನೀಡಲಿಲ್ಲ. ಕೊನೆಗೆ ಕುರುಬರ ದೇವಸ್ಥಾನದ ಬಳಿ ಸಭೆ ನಡೆಸಿದೆವು. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇದೆ ಎನ್ನಲು ಇದೊಂದು ಉದಾಹರಣೆ ಸಾಕು.
ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲ. ಗೂಂಡಾಗಿರಿ ಮಾಡುತ್ತಿದ್ದವರಿಂದ ನಾವು ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅದರ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಬಿಜೆಪಿಯ ಜನಾಂದೋಲನದ ಹಿಂದೆ ರಾಜಕೀಯ ಉದ್ದೇಶ ಬಿಟ್ಟರೆ ಬೇರೇನಿದೆ?
ಸಂವಿಧಾನದ ನಿಯಮಗಳಡಿ ಅಧಿವೇಶನ ಕರೆಯಲಾಗಿದೆ:
ವರ್ಷದಲ್ಲಿ ಜಂಟಿ ಅಧಿವೇಶನ ಕಡ್ಡಾಯವಾಗಿ ಕರೆಯಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಅದಕ್ಕಾಗಿ ಕರೆದಿದ್ದೇವೆ. ಇದು ಅಧಿಕಾರ ದುರ್ಬಳಕೆ ಹೇಗಾಗುತ್ತದೆ?
ಮನರೇಗಾ ಮೂಲಕ ಉದ್ಯೋಗ ಖಾತ್ರಿ, ಶಿಕ್ಷಣ, ಮಾಹಿತಿ ಹಕ್ಕು ಆಹಾರ ಭದ್ರತೆ ತಂದದ್ದು ಯುಪಿಎ ಸರ್ಕಾರ. ಅದನ್ನು ಹಾಳು ಮಾಡಲು ಹೊರಟಿರುವುದನ್ನು ಖಂಡಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ವಿಬಿ ಗ್ರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಜೀವಿಕ ಮಿಷನ್ ಗ್ರಾಮೀಣ) ಎನ್ನುವುದು ಇದರ ಅರ್ಥ. ಕಾರ್ಯಕ್ರಮವನ್ನು ರದ್ದು ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.