ADVERTISEMENT

ಬೃಹತ್ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ‌ ಅಡ್ಡಗಾಲು: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 12:55 IST
Last Updated 6 ಮಾರ್ಚ್ 2024, 12:55 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಕೊಟ್ಟಲಗಿ (ಬೆಳಗಾವಿ ಜಿಲ್ಲೆ): 'ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದೆ. ಆದರೆ, ಬೃಹತ್ ಯೋಜನೆಗಳಿಗೆ ಕೇಂದ್ರವೇ ಅಡ್ಡಗಾಲು ಹಾಕಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಅಥಣಿ ತಾಲ್ಲೂಕಿನ ಕೊಟ್ಟಲಗಿಯಲ್ಲಿ ₹1,486 ಕೋಟಿ ವೆಚ್ಚದ ಅಮ್ಮಾಜೇಶ್ವರಿ ಏತನೀರಾವರಿಗೆ ಬುಧವಾರ ಚಾಲನೆ‌ ನೀಡಿ ಅವರು ಮಾತನಾಡಿದರು.

'ಕೃಷ್ಣಾ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ನೋಟಿಫಿಕೇಷನ್ ಹೊರಡಿಸುತ್ತಿಲ್ಲ. ಬಹು ನಿರೀಕ್ಷೆಯ ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ‌ ನೀಡಿಲ್ಲ. ಹೀಗಾದರೆ ರೈತರು ಬದುಕುವುದು ಹೇಗೆ' ಎಂದು ಪ್ರಶ್ನಿಸಿದರು.

ADVERTISEMENT

'ಚುನಾವಣೆ ಹೊಸ್ತಿಲಲ್ಲಿ ಮಹದಾಯಿಗೆ ಚಾಲನೆ‌ ದೊರೆಯಿತು ಎಂದು ಬಿಜೆಪಿಯವರು ಸುಳ್ಳು ಹೇಳಿದರು. ಪ್ರಧಾನಿ ಮೋದಿಗೆ ಅಭಿನಂದನೆಗಳ ಸುರಿಮಳೆಗೈದರು. ಆದರೆ ಎಲ್ಲಿ ಕೆಲಸವಾಗಿದೆ? ಇವತ್ತೇ ಅವರು ಕೇಂದ್ರದಿಂದ ಅನುಮತಿ ತಂದರೆ, ನಾಳೆಯೇ ನಾನು ಕಾಮಗಾರಿ ಆರಂಭಿಸುತ್ತೇನೆ. ಈ ಚಾಲೇಂಜ್ ಒಪ್ಪಿಕೊಳ್ಳಲು ಬಿಜೆಪಿ ಸಂಸದರು ಸಿದ್ಧರಿದ್ದೀರಾ' ಎಂದೂ ಸವಾಲು ಹಾಕಿದರು.

'ಭದ್ರಾ ಮೇಲ್ದಂಡೆ‌ ಯೋಜನೆಗೆ ಕೇಂದ್ರ ಬಜೆಟ್ಟಿನಲ್ಲಿ ₹5,300 ಕೋಟಿ‌ ಘೋಷಣೆ ಮಾಡಿದರು. ಇದೂವರೆಗೆ ಒಂದು ರೂಪಾಯಿ ಕೂಡ ಬಂದಿಲ್ಲ. ಇವರನ್ನು ಗೆಲ್ಲಿಸಿ‌ ಏನು ಪ್ರಯೋಜನವಾಯಿತು' ಎಂದೂ ಕಿಡಿ ಕಾರಿದರು.

'ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೀರಿ. ಒಬ್ಬರಾದರೂ ಇದರ ಬಗ್ಗೆ ಬಾಯಿ ಬಿಡುತ್ತಾರಾ? ಯಡಿಯೂರಪ್ಪ, ಬೊಮ್ಮಾಯಿ ಸೇರಿದಂತೆ ಯಾರಿಗೂ ಮೋದಿ ಮುಂದೆ ಮಾತನಾಡುವ ಧೈರ್ಯ ಇಲ್ಲ. ಯಾವ ದೈರ್ಯದ ಮೇಲೆ ಇವರು ಲೋಕಸಭೆ ಚುನಾವಣೆಯಲ್ಲಿ ಮತ ಕೇಳುತ್ತಾರೆ' ಎಂದೂ ದೂರಿದರು.

'ರಾಜ್ಯದಲ್ಲಿ ಎಲ್ಲಿ ನೀರು ಲಭ್ಯವಿದೆಯೋ ಅಲ್ಲಿ ಪ್ರತಿ ಹನಿಯನ್ನೂ ರೈತರಿಗೆ ನೀಡಬೇಕು ಎಂಬುದು ನಮ್ಮ ಉದ್ದೇಶ. ನೀರು ವ್ಯರ್ಥವಾಗಿ ಸಮುದ್ರ ಸೇರಬಾರದು. ಹೀಗಾಗಿ ಏತನೀರಾವರಿಗಳ ಮೂಲಕ‌ ಕೆರೆಗಳಿಗೆ ನೀರು‌ ತುಂಬಿಸಲು ₹4,000 ಕೋಟಿ ಮೀಸಲು ಇಟ್ಟಿದ್ದೇವೆ' ಎಂದು ಸಿದ್ದರಾಮಯ್ಯ ಹೇಳಿದರು.

'ಅಮ್ಮಾಜೇಶ್ವರಿ ಯೋಜನೆ ಪೂರ್ಣಗೊಂಡರೆ ಅಥಣಿ‌ ತಾಲ್ಲೂಕಿನ 50 ಸಾವಿರ ಎಕರೆ ಪ್ರದೇಶ ನೀರಾವರಿ ಆಗಲಿದೆ. ಕೃಷ್ಣಾ ನದಿಯಿಂದ ಮೂರು ಟಿಎಂಸಿ ಅಡಿ‌ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಹಲವು ಗ್ರಾಮಗಳ ಕೆರೆಗಳಿಗೆ ನೀರು‌ ತುಂಬಿಸಿ ಅಂತರ್ಜಲ ಹೆಚ್ಚಲು ಅನುಕೂಲ ಆಗಲಿದೆ. ಅಥಣಿ ತಾಲ್ಲೂಕಿನ ಶೇ 95 ಪ್ರದೇಶ ನೀರಾವರಿ ಆಗಲಿದೆ' ಎಂದರು.

'ಲೋಕಸಭೆ ಚುನಾವಣೆ ಮುಗಿದ ತಕ್ಷಣ ಗ್ಯಾರಂಟಿ‌ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಮುಂದಿನ ವರ್ಷದ ಗ್ಯಾರಂಟಿಗೆ ₹56 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಅಭಿವೃದ್ಧಿಗೂ ₹65 ಸಾವಿರ ಕೋಟಿ ಇಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿಯೂ ನಿಲ್ಲುವುದಿಲ್ಲ, ಅಭಿವೃದ್ಧಿಯೂ ನಿಲ್ಲುವುದಿಲ್ಲ' ಎಂದರು.

'ಮತ ಕೇಳುವುದಕ್ಕಾಗಿ ರಾಮಮಂದಿರ'

'ಬಿಜೆಪಿಯವರು ಮತ ಕೇಳುವುದಕ್ಕಾಗಿಯೇ ರಾಮಮಂದಿರ ಕಟ್ಟಿದರು. ಏನೇ ಕೇಳಿದರೂ ಬರೀ ರಾಮ ರಾಮ ರಾಮ ಎನ್ನುತ್ತಾರೆ. ನಾನೂ ನಮ್ಮೂರಿನಲ್ಲಿ ಎರಡು ಮಂದಿರ ಕಟ್ಟಿಸಿದ್ದೇ‌ನೆ.‌ ನಾನು ಬರೀ ರಾಮ ಎನ್ನುವುದಿಲ್ಲ 'ಸೀತಾರಾಮ' ಎನ್ನುತ್ತೇನೆ' ಎಂದು ಸಿದ್ದರಾಮಯ್ಯ ಹೇಳಿದರು.

'ರಾಮ ಮಂದಿರವೆಂದರೆ ಬರೀ ರಾಮನಲ್ಲ. ಸೀತಾ, ಲಕ್ಷ್ಮಣ, ಹನುಮಂತ ಕೂಡ ಅಲ್ಲಿರುತ್ತಾರೆ. ನಾವು ಕೂಡ ಹನುಮನ ಜನ್ಮನೆಲೆ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಕೊಟ್ಟಿದ್ದೇವೆ. ಆದರೆ, ಅವರಂತೆ ದೇವರ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ' ಎಂದರು.

'ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಬರೀ ಬುರುಡೆ ಬಿಡುತ್ತಾರೆ. ಧರ್ಮ, ದೇವರ ಹೆಸರಲ್ಲಿ ಸಮಾಜದಲ್ಲಿ ಕಂದಕ‌ ಮೂಡಿಸುತ್ತಾರೆ' ಎಂದರು.

'ಮೋದಿ ಮಾತಿಗೆ ಕೋಲೆಬಸವನಂತೆ ತಲೆ ಅಲ್ಲಾಡಿಸುವವರನ್ನು ಲೋಕಸಭೆಗೆ ಕಳಿಸಬೇಡಿ. ರಾಜ್ಯದ ಪರವಾಗಿ ಧ್ವನಿ ಎತ್ತುವ ನಮ್ಮ ಅಭ್ಯರ್ಥಿ ಗೆಲ್ಲಿಸಿ' ಎಂದು ಕರೆ‌ ನೀಡಿದರು.

'ಶಾಸಕ ಲಕ್ಣ್ಮಣ ಸವದಿ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗಲಿದೆ. ಒಳ್ಳೆಯ ಕೆಲಸಗಾರ. ಅವರಿಗೆ ಪಕ್ಷದಲ್ಲಿ ಭವಿಷ್ಯವಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.