ADVERTISEMENT

ಕೋಮು ದ್ವೇಷದ ಚಟುವಟಿಕೆ | ಕಾರ್ಯಪಡೆ ಕಾಯಂ ಆಗಿರಬೇಕಿಲ್ಲ: ಸಚಿವ ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 0:36 IST
Last Updated 13 ಆಗಸ್ಟ್ 2025, 0:36 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ದ್ವೇಷದ ಚಟುವಟಿಕೆಗಳನ್ನು ಹತ್ತಿಕ್ಕಲು ಹೊಸದಾಗಿ ವಿಶೇಷ ಕಾರ್ಯಪಡೆ (ಎಸ್‌ಎಎಫ್‌) ರಚಿಸಲಾಗಿದ್ದು, ಇದು ಕಾಯಂ ಆಗಿ ಇರಬೇಕೆಂದೇನೂ ಇಲ್ಲ. ಶಾಂತಿ ನೆಲಸುವುದಷ್ಟೇ ಮುಖ್ಯ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್‌ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಅಲ್ಲಿನವರು ತಮ್ಮ ಮಕ್ಕಳನ್ನು ವ್ಯಾಸಂಗಕ್ಕಾಗಿ ಇತರೆಡೆ ಕಳುಹಿಸುತ್ತಿದ್ದಾರೆ. ಉದ್ಯಮಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿಯ ಮಾಹಿತಿ ಸಂಗ್ರಹದ ವೇಳೆ ಲಭ್ಯವಾಗಿತ್ತು. ಕೋಮುಸೌಹಾರ್ದವೂ ಹಾಳಾಗಿದೆ ಎಂಬ ಆತಂಕವೂ ಆ ಭಾಗದ ಜನಪ್ರತಿನಿಧಿ
ಗಳಲ್ಲಿದೆ’ ಎಂದರು.

ADVERTISEMENT

‘ನಾನು ಇತ್ತೀಚೆಗೆ ಶಾಂತಿ ಸಭೆ ನಡೆಸಿದ್ದು, ಯಶಸ್ವಿಯಾಗಿದೆ. ಶಾಂತಿಯಿಂದ ಇರಬೇಕು ಎಂಬ ಭಾವನೆ ಎಲ್ಲರಲ್ಲೂ ಬರುತ್ತಿದೆ. ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ನಡೆದಿದೆ’ ಎಂದೂ ಹೇಳಿದರು.

‘ವಿಶೇಷ ಕಾರ್ಯಪಡೆಯು ಅನಗತ್ಯವಾಗಿ ಯಾರಿಗೂ ತೊಂದರೆ ನೀಡಿಲ್ಲ. ಮಧ್ಯರಾತ್ರಿ ಮನೆಗೆ ಹೋಗಿ ಹಿರಿಯ ನಾಗರಿಕರನ್ನು ವಿಚಾರಣೆ ನಡೆಸುವ ಕೆಲಸವನ್ನೂ ಮಾಡಿಲ್ಲ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಸ್ಥಿತಿಗತಿ ಬಗ್ಗೆ ನಾನೇ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳ ಸಹಕಾರವೂ ಮುಖ್ಯ’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯು ಕೇರಳಕ್ಕೆ ಹೊಂದಿಕೊಂಡಿದ್ದು, ಡ್ರಗ್ಸ್‌, ಗಾಂಜಾ ಹಾವಳಿ ವ್ಯಾಪಕವಾಗಿದ್ದು, ನಿಗ್ರಹಿಸಬೇಕಿದೆ. ವಿಶೇಷ ಕಾರ್ಯಪಡೆ ರಚನೆ ಉತ್ತಮವಾಗಿದೆ. ಗೋವು ಕಳವು, ಗೋಹತ್ಯೆಯಾದರೂ ಈ ರೀತಿ ಘಟನೆಗಳು ಸಂಭವಿಸುತ್ತವೆ. ಹೀಗಾಗಿ ಗೋಹತ್ಯೆ ಹಾಗೂ ಲವ್‌ ಜಿಹಾದ್‌ನಂಥ ಪ್ರಕರಣಗಳನ್ನು ಕಾರ್ಯಪಡೆ ವ್ಯಾಪ್ತಿಗೆ ತರಬೇಕು’ ಎಂದು ವೇದವ್ಯಾಸ ಕಾಮತ್ ಆಗ್ರಹಿಸಿದರು.

ಆಗ ಪರಮೇಶ್ವರ, ‘ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾ ವಲು ಎಂದು ಉಲ್ಲೇಖಿಸಲಾಗಿದ್ದು, ಆ ಅಂಶಗಳೆಲ್ಲಾ ಇದರಲ್ಲಿ ಸೇರ್ಪಡೆಯಾಗು ತ್ತವೆ. ಜಾನುವಾರು ಕಳ್ಳತನ, ಸಾಗಣೆ, ಮಾದಕ ವಸ್ತು ಸಾಗಣೆಯಂಥ ಪ್ರಕರಣ ಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ’ ಎಂದು ಪ್ರಶ್ನಿಸಿದರು.

ಸಭಾಧ್ಯಕ್ಷ ಯು.ಟಿ. ಖಾದರ್‌, ‘ಕರಾವಳಿ ಭಾಗದಲ್ಲಿ ದ್ವೇಷದಿಂದ ಹಿಂಸಾಚಾರ ನಡೆಯುತ್ತಿಲ್ಲ. ಭಯದ ವಾತಾವರಣವಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ಆಯೋಜಿಸಿ ಸಂಬಂಧ ಪಟ್ಟ ಜಿಲ್ಲೆಗಳ ಜನಪ್ರತಿನಿಧಿಗಳನ್ನು ಆಹ್ವಾನಿಸಿದರೆ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಬಹುದು’ ಎಂದರು.

ಕೊಲೆ, ಗಲಭೆ ಪ್ರಕರಣ
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023ರಲ್ಲಿ 11 ಕೊಲೆ ಪ್ರಕರಣಗಳು ದಾಖಲಾಗಿತ್ತು. ಆ ಪೈಕಿ, 10 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಒಂದು ಪ್ರಕರಣ ತನಿಖೆಯ ಹಂತದಲ್ಲಿದೆ. 2024ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು 12ಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. 2025ರಲ್ಲಿ ಜುಲೈವರೆಗೆ ಆರು ಪ್ರಕರಣಗಳು ದಾಖಲಾಗಿದ್ದು, 2 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2023ರಲ್ಲಿ 50 ಗಲಭೆ ಪ್ರಕರಣಗಳಲ್ಲಿ 24 ಪ್ರಕರಣಗಳಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2024ರಲ್ಲಿ 31ರಲ್ಲಿ 24 ಪ್ರಕರಣಗಳಿಗೆ ಹಾಗೂ 2025ರ ಜುಲೈವರೆಗೂ 16 ಗಲಭೆ ಪ್ರಕರಣಗಳಲ್ಲಿ 2 ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2023ರಲ್ಲಿ 12, 2024ರಲ್ಲಿ 6, 2025ರ ಜುಲೈ ವರೆಗೂ 3 ಕೊಲೆ ಪ್ರಕರಣಗಳು ವರದಿಯಾಗಿವೆ’ ಎಂದು ಪರಮೇಶ್ವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.