ADVERTISEMENT

ಶೀತ ಗಾಳಿ: ರಾಜ್ಯದ ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 13:57 IST
Last Updated 16 ಡಿಸೆಂಬರ್ 2025, 13:57 IST
   

ಬೆಂಗಳೂರು: ರಾಜ್ಯದ ವಿವಿಧೆಡೆ ಬೀಸುತ್ತಿರುವ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ, ಚಳಿ ಹೆಚ್ಚಾಗುತ್ತಿದೆ. ಬುಧವಾರವೂ ಮೂರು ಜಿಲ್ಲೆಗಳಲ್ಲಿ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದ್ದು, ಈ ಜಿಲ್ಲೆಗಳಲ್ಲಿ ಶೀತ ಗಾಳಿ ಮುಂದುವರಿಯುವ ಸಾಧ್ಯತೆಯಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ ಐದು ದಿನ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. 

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಧಾರವಾಡ, ಬೀದರ್, ಗದಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶವು ಗಣನೀಯವಾಗಿ ಕುಸಿತವಾಗಿತ್ತು. ಧಾರವಾಡದಲ್ಲಿ ಕನಿಷ್ಠ ಉಷ್ಣಾಂಶವು 9.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಅಲ್ಲಿ ಸಾಮಾನ್ಯಕ್ಕಿಂತ 5.1 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿತ್ತು. ಅದೇ ರೀತಿ, ಕನಿಷ್ಠ ಉಷ್ಣಾಂಶವು ಬೀದರ್‌ನಲ್ಲಿ 9.8 ಡಿಗ್ರಿ ಸೆಲ್ಸಿಯಸ್, ವಿಜಯಪುರದಲ್ಲಿ 10.5 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. 

ADVERTISEMENT

ಬೆಂಗಳೂರು ನಗರದಲ್ಲಿ ಕನಿಷ್ಠ ಉಷ್ಣಾಂಶವು 16.4 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಿಗ್ಗೆ ವೇಳೆ ದಟ್ಟ ಮಂಜು ಕವಿಯುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.