ADVERTISEMENT

Karnataka Weather | 14 ಜಿಲ್ಲೆಗಳಲ್ಲಿ ಶೀತ ಗಾಳಿ: ಹವಾಮಾನ ಇಲಾಖೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 13:15 IST
Last Updated 14 ಡಿಸೆಂಬರ್ 2025, 13:15 IST
   

ಬೆಂಗಳೂರು: ರಾಜ್ಯದ ವಿವಿಧೆಡೆ ದಿನದಿಂದ ದಿನಕ್ಕೆ ತಾಪಮಾನ ಕುಸಿತವಾಗುತ್ತಿದ್ದು, ರಾಜ್ಯದ 14 ಜಿಲ್ಲೆಗಳಲ್ಲಿ ಸೋಮವಾರ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಶೀತ ಗಾಳಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮುಂದಿನ ಎರಡು ದಿನಗಳ ಅವಧಿಯಲ್ಲಿ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಿಲ್ಲ. ನಂತರ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

ಬೆಂಗಳೂರಿನಲ್ಲಿ ಮುಂಜಾನೆ ಕೆಲವೆಡೆ ದಟ್ಟ ಮಂಜು ಕವಿಯುವ ಸಾಧ್ಯತೆಯಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಡಿಗ್ರಿ ಸೆಲ್ಸಿಯಸ್ ಮತ್ತು 14 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. 

ADVERTISEMENT

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಬೀದರ್ ಮತ್ತು ದಕ್ಷಿಣ ಒಳನಾಡಿನ ಧಾರವಾಡ, ವಿಜಯ‍ಪುರ ಜಿಲ್ಲೆಯಲ್ಲಿ ಶೀತ ಅಲೆಗಳು ಕಾಣಿಸಿಕೊಂಡಿದ್ದವು.  

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶವು ಗಣನೀಯವಾಗಿ ಕುಸಿತವಾಗುತ್ತಿದ್ದು, ವಾಡಿಕೆಗಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಡಿಮೆಯಾದ ಪರಿಣಾಮ ಚಳಿಯ ತೀವ್ರತೆ ಹೆಚ್ಚುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.