ADVERTISEMENT

ಹೆಗ್ಗಡಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪರಿಸರ ಪ್ರೀತಿ, ಪ್ರತಿಭಟನೆಗೆ ಮಣಿದ ಕೋಲ್ಗೇಟ್

ಪರಿಸರಸ್ನೇಹಿ ಪ್ಯಾಕಿಂಗ್ ಮೆಟೀರಿಯಲ್ ಅಭಿವೃದ್ಧಿಪಡಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 15:25 IST
Last Updated 29 ಜೂನ್ 2019, 15:25 IST
ಚಿತ್ರ ಕೃಪೆ: ಸಂತೋಷ ಗುಡ್ಡಿಯಂಗಡಿ
ಚಿತ್ರ ಕೃಪೆ: ಸಂತೋಷ ಗುಡ್ಡಿಯಂಗಡಿ   

ಮೈಸೂರು:ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿಯ ವಿರುದ್ಧ ನಂಜನಗೂಡಿನಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ನಡೆಸುತ್ತಿರುವ ವಿಶಿಷ್ಟ ಪ್ರತಿಭಟನೆಗೆ ಮೊದಲ ಹಂತದ ಯಶಸ್ಸು ದೊರೆತಿದೆ. ಮಕ್ಕಳ ಪರಿಸರ ಪ್ರೀತಿ, ಪ್ರತಿಭಟನೆಗೆ ಮಣಿದಿರುವ ಕೋಲ್ಗೇಟ್ ಕಂಪನಿಯುಪರಿಸರಸ್ನೇಹಿ ಪ್ಯಾಕಿಂಗ್ ಮೆಟೀರಿಯಲ್ ಅಭಿವೃದ್ಧಿಪಡಿಸುವ ಭರವಸೆ ನೀಡಿದೆ.

ಹೀಗಿತ್ತು ಪ್ರತಿಭಟನೆ:ವಿವಿಧ ಕಂಪನಿಗಳ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯಾ ಕಂಪನಿಗಳಿಗೆ ಕಳುಹಿಸಿಕೊಡುವುದೇ ವಿದ್ಯಾರ್ಥಿಗಳು ಆಯ್ದುಕೊಂಡ ವಿಶಿಷ್ಟ ಪ್ರತಿಭಟನಾ ವಿಧಾನ. ಹೀಗೆ ಕಳೆದ ಎರಡು ತಿಂಗಳಲ್ಲಿ 17 ಕಂಪನಿಗಳಿಗೆ ಕಸ ಕಳುಹಿಸಿಕೊಡಲಾಗಿತ್ತು. ಮೂರನೇ ಕಂತಿನಲ್ಲಿ ಕಸ ಕಳುಹಿಸಲು ಸಿದ್ಧತೆ ನಡೆಸುತ್ತಿರುವಾಗಲೇಕೋಲ್ಗೇಟ್ ಕಂಪನಿಯು ವಿದ್ಯಾರ್ಥಿಗಳಿಗೆ ಪತ್ರ ಬರೆದಿದೆ ಎಂದುಸಂತೋಷ ಗುಡ್ಡಿಯಂಗಡಿಎಂಬುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸಂತೋಷ್ ಗುಡ್ಡಿಯಂಗಡಿಯವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಮತ್ತು ಕೋಲ್ಗೇಟ್ ಕಂಪನಿಯು ಮಕ್ಕಳಿಗೆ ಬರೆದ ಪತ್ರದ ಸಾರ ಹೀಗಿದೆ:

ADVERTISEMENT

#ನಾಳೆಗಳುನಮ್ಮದು
#ನಿಮ್ಮ_ಕಸ_ನಿಮಗೆ

ಮೊದಲ#ಪ್ರತಿಕ್ರಿಯೆಬಂದಿದೆ.

ಎರಡು ತಿಂಗಳಲ್ಲಿ 17ಕಂಪನಿಗಳಿಗೆ ಕಸ ಕಳುಹಿಸಿ ಮೂರನೇ ಕಂತಿನ ಕಸ ಕಳುಹಿಸಲು ಸಿದ್ಧತೆಯಲ್ಲಿದ್ದಾಗ ಕೊಲ್ಗೇಟ್ ಕಂಪನಿಯ ಪ್ರತಿಕ್ರಿಯೆ ಬಂದಿದೆ. ತಾವು ಖಂಡಿತ ಪ್ಲಾಸ್ಟಿಕ್ ತ್ಯಾಜ್ಯ ಪುನರ್ಬಳಕೆ ಮಾಡುವುದಾಗಿ #colgate_palmoliveಕಂಪನಿ ಹೆಗ್ಗಡಹಳ್ಳಿಯ ಮಕ್ಕಳಿಗೆ ಪತ್ರ ಬರೆದಿದೆ.

‘ಪ್ರೀತಿಯ ಹೆಗ್ಗಡಹಳ್ಳಿಯ ಮಕ್ಕಳೇ, ಪರಿಸರದ ಬಗ್ಗೆ ನಿಮಗಿರುವ ಕಾಳಜಿ ಮತ್ತು ಬದ್ಧತೆ ಕಂಡು ಅತೀವ ಸಂತಸವುಂಟಾಗಿದೆ. ನಮ್ಮ ವಿಶೇಷ ಪರಿಣಿತರ ತಂಡವು ಪರಿಸರಸ್ನೇಹಿ ಪ್ಯಾಕಿಂಗ್ ಮೆಟೀರಿಯಲ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ನಮ್ಮ ಉತ್ಪನ್ನಗಳಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ. ಹೆಚ್ಚು ಪುನರ್ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಅನ್ನೇ ಬಳಸುತ್ತಿದ್ದೇವೆ. ನಾವು ‘ಪಿವಿಸಿ’ ಪ್ಲಾಸ್ಟಿಕ್ ಬಳಕೆಯನ್ನು ಶೇ 98ರಷ್ಟು ಕಡಿಮೆ ಮಾಡಿದ್ದೇವೆ. ಶೇ 100ರಷ್ಟು ಪ್ಲಾಸ್ಟಿಕ್ ಪುನರ್ಬಳಕೆಯತ್ತ ಹೆಜ್ಜೆಯಿಟ್ಟಿದ್ದೇವೆ. ನಾವು, ಬಹುಶಃ 2025ರ ಹೊತ್ತಿಗೆ ಸಂಪೂರ್ಣ ಗುರಿ ಸಾಧಿಸಲಿದ್ದೇವೆ.

ನಾವು ಪರಿಸರದ ಬಗ್ಗೆ ನಿಮಗಿರುವ ಕಾಳಜಿ ಮತ್ತು ಬದ್ಧತೆಯನ್ನು ಗೌರವಿಸುತ್ತೇವೆ. ಪ್ರತಿಯೊಬ್ಬರೂ ಉತ್ತಮ ಭವಿಷ್ಯವನ್ನು ಹೊಂದಲಿ ಎಂಬುದು ನಮ್ಮ ಕಾಳಜಿಯಾಗಿದೆ’

ಪತ್ರದ ಜೊತೆ ಮಕ್ಕಳಿಗಾಗಿ ಮೂರು ಪೇಸ್ಟು ಮತ್ತು ಎರಡು ಬ್ರಷ್‌ಗಳನ್ನೂ ಕಂಪನಿಯವರು ಕಳುಹಿಸಿದ್ದಾರೆ ಎಂದುಸಂತೋಷ್ ಗುಡ್ಡಿಯಂಗಡಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.