ADVERTISEMENT

ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿದೆ: ಬಿಜೆಪಿ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಏಪ್ರಿಲ್ 2022, 9:41 IST
Last Updated 19 ಏಪ್ರಿಲ್ 2022, 9:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹುಬ್ಬಳ್ಳಿ ನಗರದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆ ಕಾಂಗ್ರೆಸ್ ಪ್ರಯೋಜಕತ್ವದಲ್ಲೇ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

ಹುಬ್ಬಳ್ಳಿ ಗಲಭೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಲೀಮ್ ಅಹಮದ್ ಅವರಿಗೆ ಟಿಕೆಟ್ ನೀಡಿದಾಗ ಹುಬ್ಬಳ್ಳಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್‌‌ ಅವರಿಗೆ ಅಸಮಾಧಾನವಾಗಿತ್ತು. ಹುಬ್ಬಳ್ಳಿ ಗಲಭೆ ಈ ಅಸಮಾಧಾನದ ಮುಂದುವರೆದ ಭಾಗವೇ?, ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿರಬಹುದು’ ಎಂದು ಪ್ರಶ್ನಿಸಿದೆ.

‘ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಭಾಗಿಯಾಗಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಶಿಕ್ಷಕಿಯೊಬ್ಬರು ರಕ್ತಪಾತದ ಬೆದರಿಕೆ ಹಾಕಿದ್ದರು. ಕಾಂಗ್ರೆಸ್ ಆಯೋಜಿಸಿದ್ದ ಈ ಪ್ರತಿಭಟನೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆಯಲ್ಲಿ ಹೇಳಿದ್ದನ್ನೇ ಮಾಡಿದ್ದಾರೆ. ವ್ಯವಸ್ಥಿತ ಪಿತೂರಿಯಿದು!’ ಎಂದು ಬಿಜೆಪಿ ದೂರಿದೆ.

‘ಒಂದು ಕಡೆ, ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಮನವಿ ಮಾಡುವುದು. ಇನ್ನೊಂದು ಕಡೆ, ಲೋಡುಗಟ್ಟಲೆ ಕಲ್ಲು ಸಂಗ್ರಹಿಸಿ ಕಲ್ಲು ತೂರಾಟ ಮಾಡಿದವರನ್ನು ಅಮಾಯಕರು ಎನ್ನುವುದು, ಇದು ಕಾಂಗ್ರೆಸ್ ನಾಯಕರ ವರಸೆ. ಪೊಲೀಸರ ಮೇಲೆಯೇ ದಾಳಿ‌ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎಂದು ಹೇಳಲು ನೀವು (ಕಾಂಗ್ರೆಸ್) ಯಾರು’ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಹಿಂದೆ #ಮೀರ್‌ಸಾದಿಕ್ (ಸಿದ್ದರಾಮಯ್ಯ) ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ. ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು‌ ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.