ADVERTISEMENT

ಉದಯಗಿರಿ ಘಟನೆಯನ್ನು ಡಿ.ಜೆ.ಹಳ್ಳಿ ಘಟನೆಗೆ ಹೋಲಿಕೆ ಮಾಡುವುದು ಸರಿಯಲ್ಲ: ಸೇಠ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 15:31 IST
Last Updated 11 ಫೆಬ್ರುವರಿ 2025, 15:31 IST
ತನ್ವೀರ್ ಸೇಠ್‌
ತನ್ವೀರ್ ಸೇಠ್‌   

ಬೆಂಗಳೂರು: ‘ಯಾವುದೇ ಪರಿಸ್ಥಿತಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಮೈಸೂರಿನ ಉದಯಗಿರಿಯ ಘಟನೆಯನ್ನು ಡಿ.ಜೆ.ಹಳ್ಳಿ ಘಟನೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್‌ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಸಂಜೆಯಾದರೂ ಎಫ್‌ಐಆರ್‌ ದಾಖಲಿಸಲಿಲ್ಲ. ಆಗ ಠಾಣೆಯ ಬಳಿಯೇ ಪ್ರತಿಭಟನೆ ನಡೆಸಿದರು. ರಾತ್ರಿ 8.30 ಕ್ಕೆ ಕಲ್ಲು ತೂರಾಟ ಮಾಡಿ, ಟೈರ್‌ಗಳಿಗೆ ಬೆಂಕಿ ಹಚ್ಚಿ, ವಾಹನಗಳಿಗೆ ಜಖಂ ಮಾಡಿದ್ದಾರೆ. ಮಧ್ಯರಾತ್ರಿ 12.30 ರ ವೇಳೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಪೆಟ್ಟಾಗಿದೆ. ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ ಘಟನೆಯೂ ನಡೆದಿದೆ’ ಎಂದರು

‘ಉದಯಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಎರಡು ಪೊಲೀಸ್‌ ಠಾಣೆಯ ಅಗತ್ಯವಿದೆ. ಜನಸಂಖ್ಯೆ ದಟ್ಟಣೆ ಇರುವ ಪ್ರದೇಶದಲ್ಲಿ ವದಂತಿಗಳು ಬೇಗ ಹರಡುತ್ತವೆ. ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸುವ ಸಂಬಂಧ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿದ್ದೇನೆ. ಎಲ್ಲ ಸಮುದಾಯಗಳ ಧಾರ್ಮಿಕ ಮುಖಂಡರಿಗೂ ಮನವಿ ಮಾಡಿದ್ದೇವೆ’ ಎಂದರು.

ADVERTISEMENT

‘ಯಾವುದೇ ಪರಿಸ್ಥಿತಿ ಬಂದರೂ ಮೊದಲಿಗೆ ನೀವು ನಂಬಿರುವ ಸಮುದಾಯದ ನಾಯಕರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅದು ಆಗಿಲ್ಲ ಎಂದರೆ ಬೇರೆ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವ ಕೆಲಸ ನಾವು ಮಾಡುತ್ತೇವೆ. ಏಕಾಏಕಿ ಈ ರೀತಿಯ ಘಟನೆಗಳು ನಡೆದರೆ ಪೊಲೀಸರಿಗೆ ಕಷ್ಟವಾಗುತ್ತದೆ’ ಎಂದು ತನ್ವೀರ್ ಸೇಠ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.