ADVERTISEMENT

ಹರ್ಷ ಹತ್ಯೆ ಬಳಿಕ ಪ್ರಚೋದನಕಾರಿ ಹೇಳಿಕೆ: ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲು

ಹರ್ಷ ಹತ್ಯೆ ಬಳಿಕ ಪ್ರಚೋದನಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 19:01 IST
Last Updated 8 ಏಪ್ರಿಲ್ 2022, 19:01 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಎರಡು ಧರ್ಮಗಳ ಜನರ ಮಧ್ಯೆ ದ್ವೇಷ ಬಿತ್ತುವ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮಹಾನಗರ ಪಾಲಿಕೆ ಸದಸ್ಯ ಎಸ್‌.ಎನ್. ಚನ್ನಬಸಪ್ಪ ವಿರುದ್ಧ ಇಲ್ಲಿನ ದೊಡ್ಡಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನ್ಯೂಮಂಡ್ಲಿ ಇಲಿಯಾಸ್‌ ನಗರದ ಪೀಸ್‌ ಆರ್ಗನೈಜೇಷನ್‌ ಸಂಘಟನೆಯ ರಿಯಾಜ್‌ ಅಹಮದ್‌ ಸಲ್ಲಿಸಿದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ‘ಕರ್ನಾಟಕ ಹಾಲಿ, ಮಾಜಿ ಶಾಸಕರು ಮತ್ತು ಸಂಸದರ ವಿರುದ್ಧ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್‌ ಕೋರ್ಟ್‌’ ಆದೇಶದಂತೆ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೆ.20ರಂದು ರಾತ್ರಿ ಹರ್ಷ ಹತ್ಯೆಯಾದ ನಂತರ ಮರುದಿನ ನಡೆದ ಶವಯಾತ್ರೆಯಲ್ಲಿ ಭಾಗವಹಿಸಿದ್ದಈಶ್ವರಪ್ಪ ಮತ್ತು ಚನ್ನಬಸಪ್ಪ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಠಾಣೆಗೆ ದೂರು ನೀಡಿದರೂ ಸ್ವೀಕರಿಸಿಲ್ಲ ಎಂದು ರಿಯಾಜ್‌ ಅಹಮದ್‌ ಕೋರ್ಟ್‌ ಮೊರೆಹೋಗಿದ್ದರು. ‘ಕೋರ್ಟ್‌ ಸೂಚನೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸಲಾಗುವುದು’ ಎಂದು ಠಾಣಾಧಿಕಾರಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.