ADVERTISEMENT

ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಪೂರ್ಣಗೊಳಿಸಿ: ರಾಜ್ಯಸಭೆಯಲ್ಲಿ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 14:17 IST
Last Updated 12 ಮಾರ್ಚ್ 2025, 14:17 IST
<div class="paragraphs"><p>ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ</p></div>

ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ

   

ನವದೆಹಲಿ: ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಆಗ್ರಹಿಸಿದರು. 

ರಾಜ್ಯಸಭೆಯಲ್ಲಿ ರೈಲ್ವೆ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದ ಅವರು, ಕರ್ನಾಟಕದ ರೈಲ್ವೆ ಯೋಜನೆಗಳ ಅಗತ್ಯವನ್ನು ಒತ್ತಿ ಹೇಳಿದರು.

ADVERTISEMENT

‘ಹಿಂದಿನ ಸರ್ಕಾರಗಳು ಕರ್ನಾಟಕದ ಹಲವಾರು ನಿರ್ಣಾಯಕ ರೈಲ್ವೆ ಯೋಜನೆಗಳನ್ನು ನಿರ್ಲಕ್ಷಿಸಿದ್ದವು. ಆದಾಗ್ಯೂ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ರಾಜ್ಯಕ್ಕೆ ರೈಲ್ವೆ ಅನುದಾನ ಹಂಚಿಕೆಯಲ್ಲಿ ಭಾರಿ ಏರಿಕೆ ಆಗಿದೆ. ಈ ಹಂಚಿಕೆಯು ₹800 ಕೋಟಿಯಿಂದ ₹7,000 ಕೋಟಿಗೆ ಏರಿದೆ’ ಎಂದರು. 

‘ನರೇಂದ್ರ ಮೋದಿ ಅವರ ಆಡಳಿತದ ಅಡಿಯಲ್ಲಿ ರಾಜ್ಯದ ಅನೇಕ ರೈಲ್ವೆ ಯೋಜನೆಗಳಿಗೆ ಮರು ಚಾಲನೆ ಸಿಕ್ಕಿದೆ. ಆದಾಗ್ಯೂ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಮತ್ತು ಶೃಂಗೇರಿಗೆ ರೈಲು ಮಾರ್ಗ ಮತ್ತು ಬೆಂಗಳೂರಿನಿಂದ ಭಾರತದ ಇತರೆ ಭಾಗಗಳಿಗೆ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ಇನ್ನೂ ಬಾಕಿ ಉಳಿದಿವೆ. ಇವುಗಳ ಕಡೆ ರೈಲ್ವೆ ಸಚಿವರು ತಕ್ಷಣ ಗಮನ ಹರಿಸಬೇಕಾಗಿದೆ’ ಎಂದು ಅವರು ಹೇಳಿದರು.

‘ಹಾಸನದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡಿದರೆ ಟಿಕೆಟ್ ವೆಚ್ಚ ₹30 ಆಗುತ್ತದೆ. ಆದರೆ, ಬಸ್ ದರಗಳು ಬಹುತೇಕ ಎರಡು–ಮೂರು ಪಟ್ಟು ಹೆಚ್ಚಾಗಿರುತ್ತವೆ. ಇದಕ್ಕಾಗಿಯೇ ರೈಲ್ವೆ ಯೋಜನೆಗಳ ವಿಸ್ತರಣೆ ಪೂರ್ಣ ವೇಗದಲ್ಲಿ ಮುಂದುವರಿಯಬೇಕು’ ಎಂದು ಅವರು ಪ್ರತಿಪಾದಿಸಿದರು.

ಹಿಂದೆ ಅನುಮೋದನೆ ಪಡೆಯಲು ವರ್ಷಗಳೇ ಹಿಡಿಯುತ್ತಿದ್ದ ರೈಲ್ವೆ ಯೋಜನೆಗಳು ಈಗ ಅಭೂತಪೂರ್ವ ವೇಗದಲ್ಲಿ ಕಾರ್ಯಗತಗೊಳ್ಳುತ್ತಿವೆ ಎಂದ ಅವರು; ತಮ್ಮ ಅಧಿಕಾರಾವಧಿಯಲ್ಲಿ ರೈಲ್ವೆ ಅನುದಾನ ಹಂಚಿಕೆ, ಯೋಜನೆಗಳ ಜಾರಿ ಇತ್ಯಾದಿ ಅಂಶಗಳನ್ನು ನೆನಪು ಮಾಡಿಕೊಂಡರು. ಅಲ್ಲದೆ, ಆಗ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮತ್ತು ನಿಧಾನಗತಿಯ ಯೋಜನಾ ಅನುಷ್ಠಾನ ಪರಿಸ್ಥಿತಿಯನ್ನು ನೆನಪಿಸಿಕೊಂಡರು.

ತಮ್ಮ ಸಲಹೆಗಳು ಟೀಕಿಸುವ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ಎಲ್ಲಾ ಪ್ರದೇಶಗಳಲ್ಲಿ ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಆಶಯವನ್ನು ಹೊಂದಿವೆ ಎಂದು ಅವರು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.