ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಪೈಕಿ ಒಬ್ಬ ಸದಾ ತನ್ನ ಜೇಬಿನಲ್ಲಿ ಕಾಂಡೊಮ್ ಇಟ್ಟುಕೊಂಡಿರುತ್ತಿದ್ದ ಎಂಬ ಸಂಗತಿ ತನಿಖೆ ವೇಳೆ ಬಹಿರಂಗವಾಗಿದೆ.
‘ಆತ ಮೈಸೂರಿಗೆ ಬರುವ ಮುಂಚೆ ತಮಿಳುನಾಡಿನಲ್ಲಿಯೇ ಕಾಂಡೊಮ್ ಖರೀದಿಸಿಟ್ಟುಕೊಂಡಿರುತ್ತಿದ್ದ. ದರೋಡೆ ಮಾಡಿದ ಹಣ, ಒಡವೆಗಳಲ್ಲಿ ಕಡಿಮೆ ಪಾಲು ಪಡೆಯುತ್ತಿದ್ದ. ಆದರೆ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ ವಿಕೃತ ಆನಂದಪಡುತ್ತಿದ್ದ. ಉಳಿದವರು ಅದನ್ನು ವಿಡಿಯೊ ಮಾಡಿಕೊಳ್ಳುತ್ತಿದ್ದರು’ ಎಂದು ತನಿಖಾ ತಂಡದಲ್ಲಿರುವ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಆರೋಪಿ ಮೂವರು ಯುವತಿಯರನ್ನು ಪ್ರೇಮಿಸಿ ವಿಫಲಗೊಂಡಿದ್ದ. ಅದೇ ಕಾರಣಕ್ಕೆ ಯುವತಿಯರನ್ನು ಲೈಂಗಿಕ ತೃಷೆಗಾಗಿಯೇ ಬಳಸಿಕೊಳ್ಳಲು ತೊಡಗಿದ್ದ’ ಎಂದು ಹೇಳಿದ್ದಾರೆ.
ಹೇಳಿಕೆ ನೀಡದೇ ತೆರಳಿರುವ ಸಂತ್ರಸ್ತೆಯ ಮೊಬೈಲ್ ಫೋನ್ ಬಂದ್ ಆಗಿದ್ದು, ಸಂತ್ರಸ್ತೆ ಸ್ನೇಹಿತನೂ ನಗರ ತೊರೆದಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನೇ ಆಧರಿಸಿ ಆರೋಪಪಟ್ಟಿ ಸಿದ್ಧಪಡಿಸುವ ಚಿಂತನೆ ನಡೆಸಿರುವ ಪೊಲೀಸರು, ಅದಕ್ಕೂ ಮುನ್ನ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಲೂ ಸಿದ್ಧತೆ ನಡೆಸಿದ್ದಾರೆ.
‘ಯುವತಿಯನ್ನು ನೇರವಾಗಿ ಭೇಟಿಯಾಗಿ ಹೇಳಿಕೆ ಪಡೆಯಲು ಅವರು ಇರುವ ರಾಜ್ಯಕ್ಕೆ ತೆರಳಲೂ ಪೊಲೀಸರು ಸಿದ್ಧತೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಸಾಮೂಹಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಸೋಮವಾರ ಆರೋಪಿಗಳನ್ನು ಕರೆ ತಂದ ಪೊಲೀಸರು ಮಹಜರು ಕಾರ್ಯವನ್ನು ನಡೆಸಿದರು.
ತನಿಖಾ ವಿಧಾನಕ್ಕೆ ಆಕ್ಷೇಪ
ಮೈಸೂರು: ಪ್ರಕರಣವನ್ನು ಪೊಲೀಸರು ನಿರ್ವಹಿಸಿದ ರೀತಿಗೆ ಆಕ್ಷೇಪ ವ್ಯಕ್ತವಾಗಿದೆ. ದೆಹಲಿ ಪ್ರಕರಣದಷ್ಟು ಗಂಭೀರವಾಗಿ ನಿರ್ವಹಿಸಿಲ್ಲ ಎಂಬ ಅಸಮಾಧಾನ ಕೇಳಿಬಂದಿದೆ.
‘ತನಿಖೆ ಪೂರ್ಣಗೊಳ್ಳುವ ಮುನ್ನವೇ ಆರೋಪಿಗಳ ಭಾವಚಿತ್ರ, ಮತ್ತು ಹೆಸರುಗಳು ಬಹಿರಂಗಗೊಂಡಿರುವುದು ವರ್ಮಾ ಆಯೋಗದ ವರದಿಗೆ ವಿರುದ್ಧ’ ಎಂದು ವಕೀಲರಾದ ಮಂಜುಳಾ ಮಾನಸ ಆಕ್ಷೇಪಿಸಿದ್ದಾರೆ. ಬೆಂಗಳೂರಿನ ವಕೀಲ ಕೆ.ವಿ.ಧನಂಜಯ್ ಅವರೂ ಟ್ವಿಟರ್‌ನಲ್ಲಿ ಆಕ್ಷೇಪಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ಸೂದ್ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಗಳ ಹೆಸರು, ಚಿತ್ರ ಬಹಿರಂಗಪಡಿಸಲು ನಿರಾಕರಿಸಿದ್ದರು. ಸಂತ್ರಸ್ತೆಯ ಇರುವಿಕೆ, ಪ್ರಯಾಣದ ವಿವರಗಳನ್ನು ಗೋಪ್ಯವಾಗಿಡಲು ಮನವಿ ಮಾಡಿದ್ದರೂ ವಿವರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.