ವಿಜಯೇಂದ್ರ
(ಸಂಗ್ರಹ ಚಿತ್ರ)
ಬೆಂಗಳೂರು: 'ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆ ಭ್ರಷ್ಟಾಚಾರ, ಲಂಚಗುಳಿತನದಿಂದ ಗಬ್ಬುನಾರುತ್ತಿದೆ' ಎನ್ನುವುದನ್ನು ಕಾಂಗ್ರೆಸ್ ಸಚಿವರು, ಶಾಸಕರೇ ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು 'ಪ್ರಜಾವಾಣಿ' ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿನ ಲಂಚಾವತಾರದ ಸ್ಥಿತಿ ಕಂಡು ಹತಾಶೆಗೊಂಡಿದ್ದಾರೆ. ಕಚೇರಿಗಳಲ್ಲಿ ಲಂಚದ ದರ ಪಟ್ಟಿಗಳನ್ನು ಲಗತ್ತಿಸಿಬಿಡಿ…..ಎಂದು ತಮ್ಮ ಅಸಹಾಯಕ ಪರಿಸ್ಥಿತಿಯ ವಸ್ತು ಸ್ಥಿತಿ ಚಿತ್ರಣವನ್ನು ತೆರೆದಿಟ್ಟು ಅಧಿಕಾರಿ, ಸಿಬ್ಬಂದಿಗಳ ಮೇಲೆ ಹರಿಹಾಯ್ದಿದ್ದಾರೆ.
ಮತ್ತೊಂದೆಡೆ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಆಳಂದ ಶಾಸಕ ಬಿ.ಆರ್ ಪಾಟೀಲ್ ಅವರು ಲಂಚ ನೀಡಿದವರಿಗಷ್ಟೇ ವಸತಿ ನಿಗಮಗಳಿಂದ ಮನೆ ವಿತರಣೆಯಾಗುತ್ತಿರುವುದರ ವಿವರ ನೀಡಿದ್ದಾರೆ. ವಸತಿ ಸಚಿವರ ಆಪ್ತ ಕಾರ್ಯದರ್ಶಿಯೊಂದಿಗೆ ನಡೆಸಿರುವ ಸಂಭಾಷಣೆಯ ಆಡಿಯೋ ತುಣುಕುಗಳು ಮಾಧ್ಯಮಗಳನ್ನು ಸೇರಿವೆ. ರಾಜ್ಯ ಸರ್ಕಾರದ ಆಡಳಿತದಲ್ಲಿ ಮಂತ್ರಿ, ಶಾಸಕರುಗಳ ಪರಿಸ್ಥಿತಿಯೇ ಈ ಪರಿಯಾದರೆ, ಇನ್ನು ಜನಸಾಮಾನ್ಯರ ಸ್ಥಿತಿ ಕಲ್ಪನಾತೀತವಾಗಿದೆ ಎಂದಿದ್ದಾರೆ.
ಖಾತೆ, ಕಂದಾಯ, ಪಹಣಿಯಿಂದ ಹಿಡಿದು ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಲಂಚ ಕೊಟ್ಟೇ ಜನರು ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಈ ಪರಿಸ್ಥಿತಿ ಯಾವುದೇ ಇಲಾಖೆ ಹೊರತಾಗಿಲ್ಲ, ಮುಖ್ಯಮಂತ್ರಿಗಳ ಕಾರ್ಯಾಲಯ, ಸಚಿವಾಲಯಗಳಿಂದಲೇ ಲಂಚಗುಳಿತನ, ಪರ್ಸೆಂಟೇಜ್ ವ್ಯವಹಾರ ಎಲ್ಲೆ ಮೀರಿದೆ ಎಂದು ಕಾಂಗ್ರೆಸ್ಸಿಗರು ಹೇಳತೊಡಗಿದ್ದಾರೆ.
ಒಂದು ಕಡೆ ಬೆಲೆ ಏರಿಕೆಯ ಸಂಕಟ, ಮತ್ತೊಂದು ಕಡೆ ಲಂಚ, ವಸೂಲಿ, ಲೂಟಿಕೋರತನದ ಹಾವಳಿಯಿಂದ ಜನ ಹಾಗೂ ಕರ್ನಾಟಕ ತತ್ತರಿಸುತ್ತಿದೆ, ಸಾಮಾನ್ಯರು ಹಾಗೂ ಬಡಜನರ ಗೋಳು ಹೇಳತೀರದಾಗಿದೆ. ಪಂಚ ಭಾಗ್ಯಗಳನ್ನು ಮುಂದಿಟ್ಟುಕೊಂಡು ತಮ್ಮ ಹುಳುಕುಗಳನ್ನೆಲ್ಲ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರ ಸರ್ಕಾರ ವ್ಯರ್ಥ ಕಸರತ್ತು ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾನೂನು, ಸುವ್ಯವಸ್ಥೆ, ಆರ್ಥಿಕ ಸ್ಥಿತಿ, ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿದೆ, ಇಂತಹ ಜನದ್ರೋಹಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದ ಬಗ್ಗೆ ಜನ ಹಾದಿ -ಬೀದಿಗಳಲ್ಲಿ ಶಪಿಸುತ್ತಿದ್ದಾರೆ. ಸದ್ಯದಲ್ಲೇ ರಾಜ್ಯ ಬಿಜೆಪಿ ಘಟಕ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಉಂಟಾಗುತ್ತಿರುವ ತೊಂದರೆ, ಲಂಚಪೀಡನೆಯ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದೂ ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘ತಾಲ್ಲೂಕು ಕಚೇರಿಯಲ್ಲಿ ಯಾವ ಕೆಲಸಕ್ಕೆ ನಿಮಗೆಲ್ಲಾ ಎಷ್ಟೆಷ್ಟು ಹಣ ಕೊಡಬೇಕು ಎಂದು ರೇಟ್‌ಬೋರ್ಡ್ ಹಾಕಿಬಿಡಿ. ಎಷ್ಟು ಹಣ ಕೊಟ್ಟರೆ ಕೆಲಸ ವಾಗುತ್ತದೆ ಎಂಬುದು ಆಗ ಎಲ್ಲ ಜನರಿಗೂ ಗೊತ್ತಾಗುತ್ತದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಗರದ ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿಗಳಿಗೆ ಗುರುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿದ ಸಚಿವರು, ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಕಚೇರಿ ಅವಧಿ ಆರಂಭವಾಗಿ ಕೆಲ ಗಂಟೆ ಕಳೆದಿದ್ದರೂ ಹಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಕಚೇರಿಗೆ ಬಂದಿರದೇ ಇರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.