ADVERTISEMENT

ಶೇ 40 ಕಮಿಷನ್: ವಿಧಾನಸಭೆಯಲ್ಲಿ ಕಾಂಗ್ರೆಸ್‌- ಬಿಜೆಪಿ ವಾಗ್ವಾದ

‘ಗುತ್ತಿಗೆ ಕಾಮಗಾರಿಗಳಲ್ಲಿ ವಾರ್ಷಿಕ ₹ 25 ಸಾವಿರ ಕೋಟಿ ಲಂಚ ವ್ಯವಹಾರ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 18:49 IST
Last Updated 29 ಮಾರ್ಚ್ 2022, 18:49 IST
   

ಬೆಂಗಳೂರು: ‘ಗುತ್ತಿಗೆ ಕಾಮಗಾರಿಗಳಲ್ಲಿ ಕಮಿಷನ್‌ ಪಡೆಯುವ ಮೂಲಕ ರಾಜ್ಯ ಸರ್ಕಾರದಲ್ಲಿ ವರ್ಷಕ್ಕೆ ₹ 25 ಸಾವಿರ ಕೋಟಿ ಮೊತ್ತದ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಪ್ರಕಾಶ್ ರಾಥೋಡ್ ಮಾಡಿದ ಆರೋಪ ಕೆಲಹೊತ್ತು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಥೋಡ್, ‘ರಾಜ್ಯ ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ಪಡೆಯುವ ಪದ್ಧತಿ ನಿಂತಿಲ್ಲವೆಂದುಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಶಾಸಕರಿಗೂ ಶೇ 15ರಷ್ಟು ಕಮಿಷನ್ ಕೊಡದಿದ್ದರೆ ಕಾಮಗಾರಿಯೇ ದೊರೆಯುತ್ತಿಲ್ಲ ಎಂದಿದ್ದಾರೆ. ಇದರಿಂದಗುತ್ತಿಗೆ ಕಾಮಗಾರಿಗಳಲ್ಲಿ ವಾರ್ಷಿಕ ₹ 25 ಸಾವಿರ ಕೋಟಿ ಲಂಚ ವ್ಯವಹಾರ ನಡೆಯುತ್ತಿದೆ. ಇದನ್ನು ವಿರೋಧಿಸಿ ಏಪ್ರಿಲ್ ಕೊನೆ ವಾರದಲ್ಲಿ 50 ಸಾವಿರ ಗುತ್ತಿಗೆದಾರರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.

‘ನಿರ್ಮಿತಿ ಕೇಂದ್ರದಿಂದ ನಡೆದ ₹ 20 ಸಾವಿರ ಕೋಟಿ ಮೊತ್ತದ ಕಾಮಗಾರಿಯಲ್ಲಿ ಶೇ 20ರಷ್ಟು ಕಾಮಗಾರಿ ಅನುಷ್ಠಾನಗೊಂಡಿಲ್ಲ. ಭ್ರಷ್ಟಾಚಾರದಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಹಗರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಆಥವಾ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ನಿರ್ದಿಷ್ಟವಾಗಿ ಯಾರ ಮೇಲಾದರೂ ದೂರುಗಳಿದ್ದರೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ. ಅದನ್ನು ಬಿಟ್ಟು ಯಾರೋ, ಏನೋ ಹೇಳಿದರು ಎಂದು ಇಲ್ಲಿ ಚರ್ಚೆ ಮಾಡಲು ಅವಕಾಶ ಇಲ್ಲ. ನಿನ್ನೆ ಸದನ ಮುಗಿದು ಇವತ್ತು ಸದನ ಶುರುವಾಗುವ ಮೊದಲು ಆದ ಘಟನೆಗಳ ಬಗ್ಗೆ ಮಾತ್ರ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಬೇಕು. ಆದರೆ, ಮಾಧ್ಯಮಗಳ ವರದಿ ಆಧರಿಸಿ ಆರೋಪ ಮಾಡುತ್ತಿದ್ದಾರೆ. ರಾಥೋಡ್ ನನ್ನ ಬಳಿ ₹ 50 ಸಾವಿರ ಕೇಳಿದ್ದಾರೆಂದು ನಾನು ಹೇಳಿದರೆ ಅದನ್ನೂ ಇಲ್ಲಿ ಪ್ರಸ್ತಾಪಿಸಲು ಸಾಧ್ಯವೇ? ಇಂಥದ್ದಕ್ಕೆಲ್ಲ ಸಭಾಪತಿ ಅವಕಾಶ ನೀಡಬಾರದು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದರಿಂದ ಅಸಮಾಧಾನಗೊಂಡ ಪ್ರಕಾಶ್ ರಾಥೋಡ್, ‘ಸಚಿವರು ನನ್ನ ಹೆಸರು ಹೇಳಿದ್ದಾರೆ. ಇದು ಸರಿಯಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಪ್ರಧಾನಿಗೂ ದೂರು ನೀಡಿದ್ದಾರೆ. ಸರ್ಕಾರ ಇದಕ್ಕೆ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ‘ಕಮಿಷನ್ ಪಡೆಯುವುದು ನಡೆದಿಲ್ಲ ಎಂದರೆ ಇಲ್ಲ ಎನ್ನಿ, ಚರ್ಚೆಗೆ ತರುವುದು ನಮ್ಮ ಕರ್ತವ್ಯ’ ಎಂದು ಕಾಂಗ್ರೆಸ್ ಪ್ರಸ್ತಾಪವನ್ನು ಸಮರ್ಥಿಸಿದರು.

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ಜೋರಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಎದ್ದುನಿಂತ ಸಭಾಪತಿ, ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.