ADVERTISEMENT

ಲಾಕ್‌ಡೌನ್‌| ₹50 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ಘೋಷಿಸಲು ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮೇ 2020, 8:32 IST
Last Updated 8 ಮೇ 2020, 8:32 IST
   

ಬೆಂಗಳೂರು: ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಉಂಟಾಗಿರುವ ಜನತೆಯ ಸಂಕಷ್ಟಗಳನ್ನು ನಿವಾರಿಸಲು ಕನಿಷ್ಠ ₹50 ಸಾವಿರ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ನಡೆಸಿದ ವಿರೋಧಪಕ್ಷಗಳ ನಾಯಕರು ಮತ್ತು ರೈತ ಮುಖಂಡರ ಸಭೆಯಲ್ಲಿ ಸಿದ್ದರಾಮಯ್ಯ ಈ ಮನವಿಯನ್ನು ಸಲ್ಲಿಸಿದರು.

ರಾಜ್ಯ ವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆಯನ್ನು ಒದಗಿಸಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ರೈತರು ಬೆಳೆದ ಪದಾರ್ಥಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೇ ಇದ್ದರೆ ಸರ್ಕಾರವೇ ಅದನ್ನು ಖರೀದಿಸಿ ರೈತರಿಗೆ ಸಹಾಯ ಮಾಡಬೇಕು. ಲಾಕ್‌ಡೌನ್‌ ಅವಧಿಯಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ನಷ್ಟ ಪರಿಹಾರ ನೀಡುವುದು ಹಾಗೆಯೇ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೇ ನಷ್ಟ ಅನುಭವಿಸಿದವರಿಗೂ ಪರಿಹಾರ ನೀಡಬೇಕು ಎಂದು ಹೇಳಿದರು.

ಬೇಡಿಕೆಯ ಪ್ರಮುಖ ಅಂಶಗಳು:

* ತರಕಾರಿ, ಹಣ್ಣು, ಹೂವು, ರೇಷ್ಮೆ ಮುಂತಾದ ಉತ್ಪನ್ನಗಳನ್ನು ಬೆಳೆದು ರೈತರು ನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿ, ನ್ಯಾಯೋಚಿತವಾಗಿ ಕನಿಷ್ಟ ಶೇ.50 ರಷ್ಟು ಪರಿಹಾರ ನೀಡಬೇಕು.

* ಸಾಂಪ್ರದಾಯಿಕ ವೃತ್ತಿ ನಡೆಸುವವರು, ಸಿನಿಮಾ, ಟಿ.ವಿ., ಧಾರವಾಹಿಗಳಲ್ಲಿ ಕೆಲಸ ಮಾಡುವ ಕಲಾವಿದರು, ಕಾರ್ಮಿಕರು ಮತ್ತು ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರು. ಬೀದಿ ಬದಿಯ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳು, ಮಂಗಳಮುಖಿಯರು, ದೇವದಾಸಿಯರು, ಅಂಗವಿಕಲರು, ಪ್ಲಾಂಟೇಶನ್ ಕಾರ್ಮಿಕರು, ಟಾಂಗಾ ಚಾಲಕರು, ದರ್ಜಿಗಳು, ಪೋಟೋಗ್ರಾಫರ್‌ಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‌ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಮತ್ತು ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆ ಕೆಲಸದವರು, ನರೇಗಾ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಮುಂತಾದ ಎಲ್ಲಾ ರೀತಿಯ ಕಾರ್ಮಿಕರಿಗೆ ಕೊರೊನಾ ಮುಗಿಯುವವರೆಗೆ ಪ್ರತಿ ತಿಂಗಳು ₹10 ಸಾವಿರ ನೀಡುವುದು.

* ಜಾನುವಾರುಗಳಿಗೆ ಉಚಿತವಾಗಿ ಹಿಂಡಿ, ಬೂಸಾ, ಮೇವು ಮತ್ತು ಪಶು ಆಹಾರಗಳನ್ನು ಉಚಿತವಾಗಿ ನೀಡಲು ಸರ್ಕಾರ ವಿಶೇಷ ಪ್ಯಾಕೇಜ್‍ನ್ನು ರೂಪಿಸಬೇಕು.

* ವಿವಿಧ ಕಾರಣಗಳಿಂದ ಮರಣ ಹೊಂದುವ ಕುರಿ, ಮೇಕೆ, ಹಸು, ಎತ್ತು, ಎಮ್ಮೆ ಮುಂತಾದವುಗಳಿಗೆ ₹ 5,000 ದಿಂದ ₹10,000 ಗಳವರೆಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಲಾಗುತ್ತಿತ್ತು. ಇದನ್ನು ಸರ್ಕಾರ ಇತ್ತೀಚಿಗೆ ನಿಲ್ಲಿಸಿದೆ. ರೈತರ ಹಿತದೃಷ್ಟಿಯಿಂದ ಸದರಿ ಯೋಜನೆಯನ್ನು ಮುಂದುವರೆಸಬೇಕು.

* ನಮ್ಮ ರಾಜ್ಯದಿಂದ ಪಿ.ಎಂ.ಕೇರ್ಸ್ ನಿಧಿಗೆ ಹೋಗಿರುವ ಎಲ್ಲಾ ಹಣವನ್ನು ಮರಳಿ ರಾಜ್ಯಕ್ಕೆ ನೀಡುವಂತೆ ಒತ್ತಾಯಿಸುವುದು. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಬಂದಿದೆ? ಇದನ್ನು ಯಾವ, ಯಾವ ಬಾಬತ್ತಿಗಾಗಿ ಖರ್ಚು ಮಾಡಲಾಗಿದೆ? ಉಳಿಕೆ ಎಷ್ಟು ಹಣ ಲಭ್ಯವಿದೆ? ಎಂಬ ಮಾಹಿತಿಯನ್ನು ‘ಶ್ವೇತ ಪತ್ರ’ ಹೊರಡಿಸುವುದು.
* ಆಹಾರ ಪದಾರ್ಥಗಳ ಕಿಟ್ ವಿತರಣೆಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು.

*ಕೊರೋನಾ ರೋಗದ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಪರಿಸ್ಥಿತಿಯನ್ನು ಎದುರಿಸಲು ತೆಲಂಗಾಣ ಮತ್ತು ಕೇರಳ ಸರ್ಕಾರಗಳು ಅನುಕ್ರಮವಾಗಿ ಸರ್ಕಾರಗಳು ₹35 ಸಾವಿರ ಕೋಟಿಗಳು ಮತ್ತು ₹ 20 ಸಾವಿರ ಕೋಟಿಗಳ ವಿಶೇಷ ಪ್ಯಾಕೇಜನ್ನು ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.