ADVERTISEMENT

ಸಂಪುಟ ವಿಸ್ತರಣೆ ಮೈತ್ರಿ ಮಧ್ಯೆ ಗೊಂದಲ

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:37 IST
Last Updated 30 ಮೇ 2019, 20:37 IST
   

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಸಂಪುಟ ವಿಸ್ತರಣೆ ಸಾಕೇ ಅಥವಾ ಪುನರ್‌ ರಚನೆ ಮಾಡಬೇಕೇ ಎಂಬ ವಿಷಯ ಮೈತ್ರಿಕೂಟದ ನಾಯಕರ ಮಧ್ಯೆ ಗೊಂದಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪ್ರತಿನಿಧಿಸುವ ಸಚಿವರು, ಹಿರಿಯ ನಾಯಕರ ಜತೆ ಗುರುವಾರ ಹಲವು ಸುತ್ತಿನ ಸಭೆ ನಡೆಯಿತಾದರೂ ಯಾವುದೇ ನಿರ್ಣಯಕ್ಕೆ ಬರಲಾಗಲಿಲ್ಲ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ದೇಶನ ಆಧರಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ADVERTISEMENT

ಕಾಂಗ್ರೆಸ್ ಶಾಸಕರಲ್ಲಿರುವ ಅತೃಪ್ತಿ ಶಮನಗೊಳಿಸಲು ಸಂಪುಟ ಪುನಾರಚನೆ ಸೂಕ್ತ ಎಂಬುದು ಬಹುತೇಕ ನಾಯಕರ ವಾದ. ‘ಖಾಲಿ ಇರುವ ಮೂರು ಸ್ಥಾನಗಳನ್ನು ಮಾತ್ರ ಭರ್ತಿ ಮಾಡೋಣ. ಪರಿಸ್ಥಿತಿ ಅವಲೋಕಿಸಿ ಪುನಾರಚನೆಗೆ ಕೈ ಹಾಕೋಣ. ಇಲ್ಲದಿದ್ದರೆ ಮೈತ್ರಿ ಸರ್ಕಾರಕ್ಕೆ ಆಪತ್ತು ಖಚಿತ’ ಎಂಬುದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಬಿಗಿ ನಿಲುವು. ಸಚಿವರ ಜತೆ ವೇಣುಗೋಪಾಲ್ ನಡೆಸಿದ ಸಭೆಯಲ್ಲಿ ಕೂಡ ಪುನರ್‌ ರಚನೆಗೆ ಸಮ್ಮತಿ ಸಿಕ್ಕಿಲ್ಲ. ‘ಚುನಾವಣೆ ಇದ್ದುದರಿಂದ ಇಲಾಖೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಜೂನ್ ಅಂತ್ಯದವರೆಗೆ ಅವಕಾಶ ಕೊಡಿ. ಆಗ ವರಿಷ್ಠರು ಸೂಚಿಸಿದರೆ ಹುದ್ದೆ ತ್ಯಜಿಸಲು ಸಿದ್ಧ’ ಎಂದು ಅನೇಕರು ಹೇಳಿದರು ಎಂದು ಗೊತ್ತಾಗಿದೆ.

ಜಿ.ಪರಮೇಶ್ವರ ಮನೆಯಲ್ಲಿ ಗುರುವಾರ ಏರ್ಪಡಿಸಿದ್ದ ಉಪಾಹಾರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ,‘ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸಂಪುಟ ಪುನರ್‌ ರಚನೆ ಪ್ರಸ್ತಾಪ ನಮ್ಮ ಮುಂದೆ ಸದ್ಯಕ್ಕಿಲ್ಲ’ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.