ADVERTISEMENT

Karnataka Politics | ‘ಕೈ’ಬಣ ಜಗಳ: ಮತ್ತೆ ಬೀದಿಗೆ

ಮುಖ್ಯಮಂತ್ರಿ ಬದಲಾವಣೆ ಇಲ್ಲ: ಯತೀಂದ್ರ ಹೇಳಿಕೆಗೆ ಡಿ,ಕೆ.ಶಿವಕುಮಾರ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 22:10 IST
Last Updated 11 ಡಿಸೆಂಬರ್ 2025, 22:10 IST
<div class="paragraphs"><p>‘ನನ್ನ ಕುರ್ಚಿ ಭದ್ರ. . .’&nbsp; ವಿಧಾನಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಸಿದ್ದರಾಮಯ್ಯ ತಮ್ಮ ಕುರ್ಚಿ ತೋರಿಸಿ ಮಾತಿನ ಚಟಾಕಿ ಆರಿಸಿದರು. ಸಭಾನಾಯಕ ಎನ್.ಎಸ್. ಬೋಸರಾಜು, ಡಿ.ಕೆ.ಶಿವಕುಮಾರ್ ಈ ವೇಳೆ ಅವರ ಪಕ್ಕದಲ್ಲಿ ಆಸೀನರಾಗಿದ್ದರು</p></div>

‘ನನ್ನ ಕುರ್ಚಿ ಭದ್ರ. . .’  ವಿಧಾನಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಸಿದ್ದರಾಮಯ್ಯ ತಮ್ಮ ಕುರ್ಚಿ ತೋರಿಸಿ ಮಾತಿನ ಚಟಾಕಿ ಆರಿಸಿದರು. ಸಭಾನಾಯಕ ಎನ್.ಎಸ್. ಬೋಸರಾಜು, ಡಿ.ಕೆ.ಶಿವಕುಮಾರ್ ಈ ವೇಳೆ ಅವರ ಪಕ್ಕದಲ್ಲಿ ಆಸೀನರಾಗಿದ್ದರು

   

ಪ್ರಜಾವಾಣಿ ಚಿತ್ರ: ರಂಜು ಪಿ.

ಸುವರ್ಣ ವಿಧಾನಸೌಧ (ಬೆಳಗಾವಿ): ಕೆಲವು ದಿನಗಳಿಂದ ಬದಿಗೆ ಸರಿದಿದ್ದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಣ ಜಗಳ, ಇಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಡುವೆಯೇ ಬಿರುಸುಗೊಂಡಿದೆ.

ADVERTISEMENT

ಯತೀಂದ್ರ ಮಾತಿಗೆ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದರೆ, ಸಿದ್ದರಾಮಯ್ಯ ಮತ್ತೆ ಹೈಕಮಾಂಡ್ ಕಡೆಗೆ ಬೊಟ್ಟು ಮಾಡಿದ್ದಾರೆ.

ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು, ಈ  ಬೆಳವಣಿಗೆಗಳ ನಂತರ, ವಿಧಾನಸಭೆಯ ಮೊಗಸಾಲೆಯಲ್ಲಿ ಚರ್ಚೆ ನಡೆಸಿದರು. ಆದರೆ, ಯಾರೊಬ್ಬರೂ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿಲ್ಲ.

ವಿಧಾನಸಭೆಯ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ ಆದರೂ ಡಿ.ಕೆ.ಶಿವಕುಮಾರ್ ಅವರು ಸದನದ ಒಳಗೇ ಕುಳಿತಿದ್ದರು. ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಗಣಿಗ ರವಿ, ಎನ್‌.ಎ.ಹ್ಯಾರಿಸ್‌, ರೂಪಾ ಶಶಿಧರ್‌, ಶಿವಣ್ಣ ಅವರು ಶಿವಕುಮಾರ್ ಅವರ ಬಳಿ ತೆರಳಿ ಕೆಲಹೊತ್ತು ಚರ್ಚಿಸಿದರು. ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಬೆಳಿಗ್ಗೆಯೇ ಸರ್ಕೀಟ್‌ ಹೌಸ್‌ನಲ್ಲಿ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸುಮಾರು ಒಂದು ತಾಸು ಚರ್ಚಿಸಿದ್ದರು.

ಕುರ್ಚಿ ಭದ್ರವಾಗಿದೆ: ಸಿದ್ದರಾಮಯ್ಯ

‘ನನ್ನ ಕುರ್ಚಿ ಭದ್ರವಾಗಿದೆ. ನಿಮ್ಮ ಕುರ್ಚಿಯನ್ನು ಮೊದಲು ಭದ್ರ ಮಾಡಿಕೊಳ್ಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್‌ನಲ್ಲಿ ಸಿದ್ದರಾಮಯ್ಯ ಅವರು ಗುರುವಾರ ಮಾತನಾಡುವಾಗ ಮೈಕ್‌ ಸಮಸ್ಯೆಯಾಯಿತು. ಆಗ, ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ‘ನಿಮ್ಮ ಕುರ್ಚಿಯಲ್ಲೇ ಈ ರೀತಿಯಾದರೆ ಉಳಿದವರ ಗತಿ ಏನು? ಮೊದಲೇ ನಿಮ್ಮ ಕುರ್ಚಿ ಅಲುಗಾಡುತ್ತಿದೆ’ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಸಂಭಾಷಣೆಯನ್ನು ಮೌನವಾಗಿ ಆಲಿಸುತ್ತಾ ಕುಳಿತಿದ್ದರು. 

ನಂತರ ಚರ್ಚೆ ಮುಂದುವರಿಸಿದ ಬಿಜೆಪಿಯ ಶಶೀಲ್‌ ನಮೋಶಿ, ‘ಸದಸ್ಯರು ಕುಳಿತುಕೊಳ್ಳುವ ಕುರ್ಚಿಗಳೂ ಸರಿ ಇಲ್ಲ. ದಾಖಲೆಗಳನ್ನು ಇಟ್ಟುಕೊಳ್ಳುವ ಟೇಬಲ್‌ ಹಾಗೂ ಕುರ್ಚಿ ಮಧ್ಯೆ ಜಾಗ ಜಾಸ್ತಿ ಇದೆ. ಪ್ರತಿ ಬಾರಿಯೂ ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು. ಅದಕ್ಕೆ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಧ್ವನಿಗೂಡಿಸಿದರು.

ದಿನದ ಬೆಳವಣಿಗೆ

ಮೊದಲು:

ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್‌ ಒಪ್ಪಿಯೇ ಇಲ್ಲ. ಐದೂ ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ

–ಯತೀಂದ್ರ ಸಿದ್ದರಾಮಯ್ಯ ಪರಿಷತ್ತಿನ ಕಾಂಗ್ರೆಸ್ ಸದಸ್ಯ

ಆಮೇಲೆ:

ಯತೀಂದ್ರ ಅವರ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಅವರು ಉತ್ತರಿಸುತ್ತಾರೆ. ನಾನಲ್ಲ

-ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಕೊನೆಗೆ:

ಈ ವಿಚಾರದಲ್ಲಿ ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ ಎಂದು ಈ ಹಿಂದೆಯೇ ಹೇಳಿದ್ದೇನೆ. ಪದೇ–ಪದೇ ಅದನ್ನೇ ಏಕೆ ಕೇಳುತ್ತೀರಿ

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಬದಲಾವಣೆಯಾದರೆ ದಲಿತರಿಗೆ ಸಿಗಲಿ: ಸ್ವಾಮೀಜಿ

‘ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಯುವುದಾದರೆ ನಮ್ಮ ಸಮಾಜದ ಶಾಸಕರ ವಿರೋಧ ಇಲ್ಲ. ವಾಲ್ಮೀಕಿ ಸಮುದಾಯದ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಒಂದು ವೇಳೆ ಬದಲಾವಣೆ ಮಾಡುವುದಾದರೆ ದಲಿತ ನಾಯಕರನ್ನೇ ಮುಖ್ಯಮಂತ್ರಿ ಮಾಡಬೇಕು. ಬೇರೆ ಯಾರೂ ಬೇಡ’ ಎಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ನಮ್ಮ ಸಮಾಜದ ನಾಲ್ಕು–ಐದು ನಾಯಕರಿದ್ದಾರೆ.‌ ಮಲ್ಲಿಕಾರ್ಜುನ ಖರ್ಗೆ ಜಿ.ಪರಮೇಶ್ವರ ಎಚ್.ಸಿ.ಮಹದೇವಪ್ಪ ಮತ್ತು ಸತೀಶ ಜಾರಕಿಹೊಳಿ ಇದ್ದಾರೆ. ಇವರಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಲಿ. ನಮ್ಮ ಅಭ್ಯಂತರವಿಲ್ಲ’ ಎಂದರು.

ಸಿ.ಎಂ ಬದಲಿಸುವ ಗಟ್ಸ್‌ ಯಾರಿಗಿದೆ: ಜಮೀರ್‌

‘ಸಿದ್ದರಾಮಯ್ಯ ಅವರನ್ನು ಬದಲಿಸುವ ಗಟ್ಸ್‌ (ಧೈರ್ಯ) ಯಾರಿಗೆ ಇದೆ? ಅದು ಇರುವುದು ಹೈಕಮಾಂಡ್‌ಗೆ ಮಾತ್ರ. ಹೈಕಮಾಂಡ್‌ ಹೇಳಿದ ಹಾಗೆ ಕೇಳುತ್ತೇವೆ ಎಂದು ಅವರೇ ಹೇಳಿದ್ದಾರೆ. ಹೀಗಿರುವಾಗ ಕುರ್ಚಿ ಬದಲಾವಣೆ ಚರ್ಚೆ ಏಕೆ’ ಎಂದು ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ಪ್ರಶ್ನಿಸಿದರು. ‘ಯತೀಂದ್ರ ಅವರು ಹೇಳಿದ ತಕ್ಷಣ ಏನೂ ಬದಲಾಗುವುದಿಲ್ಲ. ಯಾರು ಹೇಳಿದರೂ ಬದಲಾಗುವುದಿಲ್ಲ. ಹೈಕಮಾಂಡ್‌ ಹಾಕುವ ಗೆರೆಯನ್ನು ನಾವು ದಾಟುವುದಿಲ್ಲ’ ಎಂದರು.

‘ಬದಲಾವಣೆ ಉದ್ಭವಿಸಿಯೇ ಇಲ್ಲ’

‘ಸ್ವಾಮೀಜಿ ಅವರು ಹೇಳಿಕೆ ನೀಡಿದರು ಎಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಾರೆ ಎಂದು ಏಕೆ ಭಾವಿಸಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದರು. ಪ್ರಸನ್ನಾನಂದ ಸ್ವಾಮೀಜಿ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಸ್ತಾಪಿಸಿದಾಗ ಅವರು ‘ಒಂದು ವರ್ಷದಿಂದ ಇಂತಹ ಚರ್ಚೆ ನಡೆಯುತ್ತಿದೆ. ಆದರೆ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆ ಉದ್ಭವಿಸಿಯೇ ಇಲ್ಲ. ಅರ್ಧ ಅವಧಿ ಅವರಿಗೆ ಅರ್ಧ ಅವಧಿ ಇವರಿಗೆ ಎಂದು ಯಾರೂ ನಮಗೆ ಹೇಳಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಜಾಗಕ್ಕೆ ಬೇರೆಯವರು ಬರಲು ಅವಕಾಶವಿಲ್ಲ’ ಎಂದರು. ಯತೀಂದ್ರ ಅವರ ಮಾತಿನಿಂದ ಸಿದ್ದರಾಮಯ್ಯ ಅವರಿಗೆ ಮುಜುಗರವಾಯಿತೆ ಎಂಬ ಸುದ್ದಿಗಾರರ ಪ್ರಶ್ನೆಗೆ ‘ಅವರು (ಯತೀಂದ್ರ) ಹಾಗೆ ಹೇಳಬಾರದು. ಅವರು ಹೇಳಿದ್ದರಿಂದ ಸಿದ್ದರಾಮಯ್ಯ ಅವರಿಗೆ ಮುಜುಗರವಾಗಿರಬಹುದು. ಇತರರು ಅಂತಹ ಮಾತು ಆಡಿದರೆ ಯಾವುದೇ ಸಮಸ್ಯೆ ಇಲ್ಲ’ ಎಂದು ಉತ್ತರಿಸಿದರು.

ವಾಲ್ಮೀಕಿ ನಾಯಕರ ಸಭೆ

ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ನಾಯಕರು ಬುಧವಾರ ರಾತ್ರಿ ನಗರದ ಹೋಟೆಲ್‌ ಒಂದರಲ್ಲಿ ಸಭೆ ನಡೆಸಿದ್ದಾರೆ. ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಶಾಸಕರಾದ ಕೆ.ಎನ್‌.ರಾಜಣ್ಣ ಕಂಪ್ಲಿ ಗಣೇಶ್‌ ರಘುಮೂರ್ತಿ ಬಸನಗೌಡ ತುರವೀಹಾಳ್ ಬಸನಗೌಡ ದದ್ದಲ್‌ ಸಭೆಯಲ್ಲಿ ಭಾಗಿಯಾಗಿದ್ದರು. ತಡರಾತ್ರಿಯವರೆಗೆ ಹಲವು ತಾಸು ಸಭೆ ನಡೆಯಿತು ಎಂದು ಗೊತ್ತಾಗಿದೆ. ‘ಶಕ್ತಿ ಪ್ರದರ್ಶನವಲ್ಲ’: ‘ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ನಾಯಕರು ಸಭೆ ನಡೆಸಿದ್ದೇವೆ. ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ಇದೇನು ಶಕ್ತಿ ಪ್ರದರ್ಶನವಲ್ಲ. ಸಮುದಾಯದ ಸಮಸ್ಯೆಗಳ ಜತೆಗೆ ಇತರ ವಿಚಾರಗಳನ್ನೂ ಚರ್ಚಿಸಿದ್ದೇವೆ. ಆ ವಿವರಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ಕೆ.ಎನ್‌.ರಾಜಣ್ಣ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ರಾಜಣ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಿದ್ದರಾಮಯ್ಯ–ಯತೀಂದ್ರ ಚರ್ಚೆ

ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ಕರೆಯಿಸಿ ಮಾತನಾಡಿದರು. ಸುವರ್ಣ ವಿಧಾನಸೌಧದಲ್ಲಿಯೇ ಯತೀಂದ್ರ ಅವರನ್ನು ಕೂರಿಸಿಕೊಂಡು ಸುಮಾರು ಹೊತ್ತು ಸಿದ್ದರಾಮಯ್ಯ ಅವರು ಮಾತನಾಡಿದರು. ನಂತರ ಇಬ್ಬರೂ ಒಂದೇ ಕಾರಿನಲ್ಲಿ ಸರ್ಕೀಟ್‌ ಹೌಸ್‌ಗೆ ತೆರಳಿದರು. ಅಲ್ಲಿ ಸುಮಾರು ಒಂದು ತಾಸು ಚರ್ಚೆಯ ನಂತರ ವಿಧಾನಸೌಧಕ್ಕೆ ಮರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.