ADVERTISEMENT

ಕಮಿಷನ್ ದಂಧೆಯಲ್ಲಿ ಮುಳುಗಿದ ಕಾಂಗ್ರೆಸ್ ಸರ್ಕಾರ: ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2025, 11:38 IST
Last Updated 2 ಮಾರ್ಚ್ 2025, 11:38 IST
<div class="paragraphs"><p> ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಕಮಿಷನ್‌ ದಂಧೆಯಲ್ಲಿ ಮುಳುಗಿದೆ. ಗೃಹಜ್ಯೋತಿ ಗ್ಯಾರಂಟಿ ಯೋಜನೆ ಜಾರಿಯಲ್ಲಿ ಚೌಕಾಸಿ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪ್ರಜಾವಾಣಿ ವರದಿಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು, ‘40% ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ, ನಿಮ್ಮ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕಮಿಷನ್ ದಾಹ ಮಿತಿಮೀರಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಜಿಎಸ್‌ಟಿ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ. ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಎಂದು ಅಶೋಕ ಪ್ರಶ್ನಿಸಿದ್ದಾರೆ.

ಸುಳ್ಳು, ಅಪಪ್ರಚಾರ, ಕುತಂತ್ರದಿಂದ 136 ಸೀಟು ಪಡೆದ ಕಾಂಗ್ರೆಸ್ ಪಕ್ಷ, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದರೆ, 36 ಸೀಟೂ ಬರುವುದಿಲ್ಲ. ಇದು ನನ್ನ ಗ್ಯಾರಂಟಿ ಎಂದು ಅವರು ಟೀಕಿಸಿದ್ದಾರೆ.

ಗೃಹಜ್ಯೋತಿ ಗ್ಯಾರಂಟಿ ಕುರಿತು ಮತ್ತೊಂದು ಪೋಸ್ಟ್‌ ಮಾಡಿರುವ ಅವರು, ‘ತಿಂಗಳು ತಿಂಗಳು ಸರಿಯಾದ ಸಮಯಕ್ಕೆ ಗೃಹಲಕ್ಷ್ಮಿ ಹಣವನ್ನ ಅಕೌಂಟ್‌ಗೆ ಹಾಕಲು ಅದೇನು ಸಂಬಳಾನಾ ಅಂತ ಉಡಾಫೆ ಮಾತಾಡಿ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಈಗ ಗೃಹಜ್ಯೋತಿ ಗ್ಯಾರೆಂಟಿ ಯೋಜನೆ ಜಾರಿಯಲ್ಲಿ ಚೌಕಾಸಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಸಚಿವ ಜಾರ್ಜ್ ಅವರೇ, ಚುನಾವಣೆಗೂ ಮುನ್ನ ಎಲ್ಲರಿಗೂ 200 ಯುನಿಟ್ ಉಚಿತ ಅಂತ ಹೇಳಿ ಅಧಿಕಾರಕ್ಕೆ ಬಂದ ಮೇಲೆ ವರ್ಷದ ಸರಾಸರಿ ಅಂತ ಟೋಪಿ ಹಾಕಿದಿರಿ. ಈಗ ಹೊಸದಾಗಿ ಮನೆ ಕಟ್ಟಿದವವರಿಗೆ, ಬಾಡಿಗೆ ಮನೆ ಬದಲಾಯಿಸಿದವರಿಗೆ ಗೃಹ ಯೋಜನೆಯ ಪೂರ್ಣ ಲಾಭ ಸಿಗುತ್ತಲೇ ಇಲ್ಲ. ಒಟ್ಟಿನಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ ಕನ್ನಡಿಗರಿಗೆ ನಂಬಿಕೆ ದ್ರೋಹ ಮಾಡುತ್ತಲೇ ಇದೆ ಎಂದು ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.