ಬೆಂಗಳೂರು: ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಆಯಾ ಖಾತೆಯ ಸಚಿವರ ಕುಟುಂಬದವರ ಹಸ್ತಕ್ಷೇಪ ಹೆಚ್ಚುತ್ತಿದ್ದು ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಬಂದ ಬೆನ್ನಲ್ಲೇ ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಇಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಘಟಕ, ಕಲೆಕ್ಷನ್-ಕಮಿಷನ್-ಕರಪ್ಷನ್‌ನಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಪಾಲಿಗೆ ಶಾಪವಾಗಿದೆ ಎಂದು ಹರಿಹಾಯ್ದಿದೆ.
ಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ದಿನ ದೂಡುತ್ತಿದೆ. ಕಮಿಷನ್ ನೀಡದೆ ಯಾವುದೇ ಬಿಲ್ ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರು ಆಗುತ್ತಿಲ್ಲ. ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವರ ಕುಟುಂಬಸ್ಥರು, ಮಧ್ಯವರ್ತಿಗಳು ಹಾಗೂ ಕಾಣದ ಕೈಗಳ ಕೈವಾಡ ಹೆಚ್ಚಾಗುತ್ತಿದ್ದು, ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ಲಂಚಬಾಕ ಸರ್ಕಾರದಿಂದಾಗಿ ಗುತ್ತಿಗೆದಾರರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಭ್ರಷ್ಟಾಚಾರದ ಕೂಪಕ್ಕೆ ಅಕೌಂಟೆಂಟ್ ಚಂದ್ರಶೇಖರ್, ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ.
ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು. ಈಗ ಸಚಿವರ ಪುತ್ರರು ಸಹ ಕಾಮಗಾರಿಯ ಹಣ ಬಿಡುಗಡೆಗೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.