ADVERTISEMENT

ಬಿಜೆಪಿಯ 'ಜನೋತ್ಸವ' ವಿರುದ್ಧ ಕಾಂಗ್ರೆಸ್‌ನಿಂದ 'ಜನಜಾಗೃತಿ' ಅಭಿಯಾನ

‘ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ?– ಕಾಂಗ್ರೆಸ್‌ನಿಂದ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 8:05 IST
Last Updated 29 ಆಗಸ್ಟ್ 2022, 8:05 IST
   

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ 'ಜನೋತ್ಸವ' ಕಾರ್ಯಕ್ರಮಕ್ಕೆ ವಿರುದ್ಧವಾಗಿ 'ಜನಜಾಗೃತಿ' ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ಈಶ್ವರ್ ಖಂಡ್ರೆ,‌ ಸತೀಶ್ ಜಾರಕಿಹೊಳಿ ಈ ಸಂದರ್ಭದಲ್ಲಿ ಇದ್ದರು. ಬಳಿಕ ಕಾಂಗ್ರೆಸ್‌ ನಾಯಕರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ‘ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಇಡೀ ದೇಶದಲ್ಲೇ ಇದು ಅತ್ಯಂತ ಭ್ರಷ್ಟ ಸರ್ಕಾರ. ಬಿಜೆಪಿ ಸುಳ್ಳು ಹೇಳುವ ಪಕ್ಷ. ಬಿಜೆಪಿ ಅಂದರೆ ಬಿಗ್ ಟ್ರೇಡ್ ಜನತಾ ಪಾರ್ಟಿ. ಬಿಜೆಪಿ ಎಂದರೆ ಬೇಕೂಫ್ ಜನತಾ ಪಾರ್ಟಿ‘ ಎಂದು ವ್ಯಂಗ್ಯವಾಡಿದರು.

'ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ– ಇದು ನಮ್ಮ ಪಕ್ಷದಿಂದ ನಡೆಯಲಿರುವ ಅಭಿಯಾನ. ವಿಧಾನಸಭೆ ಚುನಾವಣೆಗೆ ಇನ್ನು ಏಳೆಂಟು ತಿಂಗಳು ಮಾತ್ರ ಇದೆ. ಅಲ್ಲಿಯವರೆಗೆ ನಾವು ಇದನ್ನೆ ಕೇಳುತ್ತೇವೆ. ಇದೇ ಪ್ರಶ್ನೆಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಶೇ 30 ಕಮೀಷನ್ ಮಠಗಳಿಗೆ, ಶೇ 40 ಗುತ್ತಿಗೆದಾರರಿಗೆ, ಶೇ 50 ಬಿಜೆಪಿ ಕಾರ್ಯಕರ್ತರಿಗೆ ಇದೆ. ಹೀಗೆ ಕಮಿಷನ್‌ನ್ನು ವಿವಿಧ ಹಂತಗಳಲ್ಲಿ ಮಾಡಿಕೊಂಡಿದ್ದಾರೆ‘ ಎಂದು ದೂರಿದರು.

‘ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆಗ ಭಾಗ್ಯಗಳನ್ನೇ ನಮ್ಮ ಸರ್ಕಾರ ನೀಡಿತ್ತು‘ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ‘ಬಸವಣ್ಣ ಹೇಳಿದ್ದು ನುಡಿದಂತೆ ನಡೆಯಬೇಕೆಂದು. ನಾವು ನುಡಿದಂತೆ ನಡೆದಿದ್ದೇವೆ. ನೀವು ನುಡಿದಂತೆ ನಡೆಯುತ್ತಿದ್ದೀರಾ? ನಾವು ಬಿಜೆಪಿಯವರಿಗೆ ಪ್ರಶ್ನೆ ಕೇಳುತ್ತೇವೆ. ಕೊಟ್ಟ ವಚನ ಈಡೇರಿಸಿದ್ದೀರಾ? ನಿಮ್ಮ ಆತ್ಮಸಾಕ್ಷಿ ಮೂಲಕ ಉತ್ತರ ಕೊಡಿ ಎಂದು ಕೇಳುತ್ತಿದ್ದೇವೆ‘ ಎಂದರು.

‘ನಿಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿದ್ರಾ? ನೀವು ನುಡಿದಂತೆ ನಡೆಯಲಿಲ್ಲ, ವಚನ ಭ್ರಷ್ಟರಾಗಿದ್ದೀರಾ? ನಾವು ಪ್ರತಿದಿನ ಒಂದೊಂದು ಪ್ರಶ್ನೆ ಕೇಳುತ್ತೇವೆ. ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡ್ರಾ ? ರೈತರ ಆದಾಯ ಡಬಲ್ ಎಂದ ಪ್ರಧಾನಿಯವರು ಎಲ್ಲಿ? ರೈತರಿಗೆ ನೀವು ಸಹಾಯ ಮಾಡಿದ್ರಾ‘ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮಾತನಾಡಿ, ‘2013ರಲ್ಲಿ ನಾವು ಪ್ರಣಾಳಿಕೆ ಹೊರಡಿಸಿದ್ದೆವು. ಜನ ಆಗ ನಮಗೆ ಅವಕಾಶ ಕೊಟ್ಟಿದ್ದರು. 122 ಸ್ಥಾನಗಳನ್ನ ನಾವು ಗೆದ್ದು ಬಂದಿದ್ದೆವು. 2018ರಲ್ಲೂ ಪ್ರಣಾಳಿಕೆ ಹೊರಡಿಸಿದ್ದೆವು. ಬಿಜೆಪಿಯವರು ಪ್ರಣಾಳಿಕೆ ಹೊರಡಿಸಿದ್ದರು. ನಾವು ಜನರಿಗೆ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆಗಳನ್ನ ಈಡೇರಿಸಿದ್ದೆವು. ಬಿಜೆಪಿಯವರು ಪ್ರಣಾಳಿಕೆಯಲ್ಲಿ 600 ವಚನಗಳನ್ನ ಕೊಟ್ಟಿದ್ದರು. ಅದರಲ್ಲಿ ಎಷ್ಟು ವಚನಗಳನ್ನ ಈಡೇರಿಸಿದ್ದಾರೆ‘ ಎಂದು ಪ್ರಶ್ನಿಸಿದರು.

‘ಕೊಟ್ಟ ಭರವಸೆಗಳಲ್ಲಿ ಶೇ 10ರಷ್ಟೂ ಈಡೇರಿಸಿಲ್ಲ. ಜನರಿಗೆ ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಬೇಕಲ್ಲವೇ? ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ವಚನಗಳ ವಂಚನೆ ಮಾಡಿದ್ದಾರೆ‘ ಎಂದು ವಾಗ್ದಾಳಿ ನಡೆಸಿದರು.

'ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ' ಎಂದು ಆರಂಭಿಸಿರುವ ಅಭಿಯಾನದಲ್ಲಿ ಕಾಂಗ್ರೆಸ್‌ ಕೇಳಿದ ಪ್ರಶ್ನೆಗಳು ಹೀಗಿವೆ...

* ರೈತರ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯಾ ಉತ್ತರ?

- ಯಾವಾಗ ಕೊಡುವಿರಿ ನಿರಂತರ ವಿದ್ಯುತ್?

- ಯಾವಾಗ ಸಿಗುತ್ತದೆ ಬೆಳೆಗಳಿಗೆ ಬೆಂಬಲ ಬೆಲೆ?

- ಹೈನುಗಾರಿಕೆಗೆ ₹3 ಸಾವಿರ ಕೋಟಿ ನಿಧಿ ಕೊಟ್ಟಿದ್ದೀರಾ?

- ಸ್ವಸಹಾಯ ಸಂಘಗಳಿಗೆ ಮತ್ತು ರೈತಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲದ ಯೋಜನೆ ಏನಾಯಿತು?

- ರೈತರಿಗೆ ಕೃಷಿ ಅಧ್ಯಯನದ ಚೀನಾ ಮತ್ತು ಇಸ್ರೇಲ್ ಪ್ರವಾಸ ಯಾವಾಗ?

* ಮಹಿಳೆಯರ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯಾ ಉತ್ತರ?

- ಏನಾಯಿತು ಮಹಿಳೆಯರ ಉಚಿತ ಸ್ಮಾರ್ಟ್ ಫೋನ್ ಯೋಜನೆ?

- ಮಹಿಳೆಯರ ರಕ್ಷಣೆಗಾಗಿ ವಿಶೇಷ ತನಿಖಾ ದಳ ರಚನೆಯ ಭರವಸೆ ಏನಾಯಿತು?

- ಮಹಿಳಾ ಉದ್ಯಮಿಗಳಿಗೆ ₹ 100 ಕೋಟಿ ನೀಡುವ ಭರವಸೆ ಏನಾಯಿತು?

- ಮಹಿಳೆಯರ ಆರ್ಥಿಕ ಸ್ವಾವಲಂಬನೆ ನೀಡುವ ಸ್ತ್ರೀ ಉನ್ನತಿ ಕೇಂದ್ರಗಳು ಎಲ್ಲಿದೆ?

* ಯುವಜನತೆಯ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯಾ ಉತ್ತರ?

- ಶಿಕ್ಷಣ ಸಂಸ್ಥೆಗಳ 57 ಸಾವಿರ ಅಧ್ಯಾಪಕರ ಖಾಲಿ ಹುದ್ದೆ ಭರ್ತಿ ಯಾವಾಗ?

- ಶಾಲಾ-ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಾಧಿಕಾರದ ಅನುಷ್ಠಾನವೆಲ್ಲಿ?

- ಪದವಿಯವರೆಗಿನ ಉಚಿತ ಶಿಕ್ಷಣ ನೀಡುವುದು ಯಾವಾಗ?

- 70 ಪದವಿ ಕಾಲೇಜುಗಳ ನಿರ್ಮಾಣದ ಭರವಸೆ ಏನಾಯಿತು?

- ಕರ್ನಾಟಕ ವಿದ್ಯಾರ್ಥಿವೇತನ ಮತ್ತು ಸಾಲ ಪ್ರಾಧಿಕಾರದ ಸ್ಥಾಪನೆಯ ಭರವಸೆ ಏನಾಯಿತು?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಶ್ನೆಗೆ ನಿಮ್ಮಹತ್ತಿರ ಇದೆಯಾ ಉತ್ತರ?

- ಎಲ್ಲಿ ಕೊಟ್ಟಿದ್ದೀರಾ ₹3000 ಕೋಟಿ ವಿದ್ಯಾರ್ಥಿವೇತನ

- ₹15 ಸಾವಿರ ಕೋಟಿ ವಸತಿ ಯೋಜನೆ ಅನುಷ್ಠಾನ ಯಾವಾಗ? ವಾಲ್ಮೀಕಿ ಭವನಗಳ ನಿರ್ಮಾಣ ಎಲ್ಲಾಯಿತು?

- ಸರ್ಕಾರಿ ಹುದ್ದೆಗಳಲ್ಲಿ ವಿಶೇಷ ನೇಮಕಾತಿ ಯೋಜನೆ ಏನಾಯಿತು?

* ಕನ್ನಡಿಗರ ಪ್ರಶ್ನೆಗೆ ನಿಮ್ಮ ಹತ್ತಿರ ಇದೆಯಾ ಉತ್ತರ?

- ವಿಶ್ವಗುರು ಬಸವಣ್ಣ, ಕುವೆಂಪು, ಶ್ರೀ ನಾರಾಯಣ ಗುರು ಅವರುಗಳಿಗೆ ಅಪಮಾನವೇಕೆ ಮಾಡಿದಿರಿ?

- ಕಸ ಮುಕ್ತ ಬೆಂಗಳೂರಿನ ಭರವಸೆ ಏನಾಯಿತು?

- ₹500 ಕೋಟಿಯಲ್ಲಿ ದೇವಸ್ಥಾನ ಹಾಗೂ ಮಠಗಳ ಜೀರ್ಣೋದ್ದಾರ ಯೋಜನೆ ಏನಾಯಿತು?

- ಕೇಂದ್ರ ಸರ್ಕಾರದ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸುವುದು ಯಾವಾಗ?

- ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳು ಕನ್ನಡ ಭಾಷೆಯಲ್ಲಿ ಇನ್ನೂ ಯಾಕಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.