ADVERTISEMENT

‘ದಳ’ಪತಿ ನಡೆ, ನಡುಗಿದ ‘ಕೈ’

ಎಚ್‌ಡಿಕೆ– ಕೆ.ಸಿ. ವೇಣುಗೋಪಾಲ್‌ ಚರ್ಚೆ: ಆಪರೇಷನ್ ಕಮಲಕ್ಕೆ ಪ್ರತಿತಂತ್ರ?

​ಪ್ರಜಾವಾಣಿ ವಾರ್ತೆ
Published 22 ಮೇ 2019, 1:23 IST
Last Updated 22 ಮೇ 2019, 1:23 IST
   

ಬೆಂಗಳೂರು: ಬೇಷರತ್ ಬೆಂಬಲ ಸೂಚಿಸಿದ ಬಳಿಕವೂ ಪದೇ ಪದೇ ಸರ್ಕಾರಕ್ಕೆ ‘ಬೆದರಿಕೆ’ ಒಡ್ಡುತ್ತಿರುವ ರಾಜ್ಯ ಕಾಂಗ್ರೆಸ್‌ ನಾಯಕರ ನಡೆಗೆ ಸಿಡಿದೆದ್ದಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಬೆಳಿಗ್ಗೆ ದೆಹಲಿ ಪ್ರವಾಸವನ್ನು ದಿಢೀರ್‌ ರದ್ದುಪಡಿಸುವ ಮೂಲಕ ತಮ್ಮ ಆಯ್ಕೆ ಮುಕ್ತವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

‘ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ’ ಎಂದು ಪದೇ ಪದೇ ಕಾಂಗ್ರೆಸ್‌ ಶಾಸಕರು, ಸಚಿವರು ಹೇಳಿಕೆ ನೀಡುತ್ತಿರುವುದರಿಂದ ಮುಜುಗರಕ್ಕೆ ಒಳಗಾಗಿರುವ ಜೆಡಿಎಸ್‌ ನಾಯಕರು, ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಬಳಿ ಅಳಲು ತೋಡಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಹೋಗುವಂತೆ ರಾಜ್ಯ ನಾಯಕರಿಗೆ ರಾಹುಲ್‌ ಗಾಂಧಿ ಕಿವಿಮಾತು ನೀಡಿದ ಬಳಿಕವೂ ನಾಯಕರು ರಾಗ ಬದಲಿಸಲಿಲ್ಲ. ಲೋಕಸಭೆ ಫಲಿತಾಂಶ ಮಿತ್ರಕೂಟಕ್ಕೆ ವಿರುದ್ಧವಾಗಿ ಬಂದರೆ, ಆಗ ‘ಕೈ’ ನಾಯಕರ ಅಸಮಾಧಾನ ಮತ್ತೆ ಭುಗಿಲೇಳದಂತೆ ತಡೆಯುವುದು, ಸರ್ಕಾರದ ಬುಡವನ್ನು ಭದ್ರ ಮಾಡಿಕೊಳ್ಳಲು ಈ ತಂತ್ರಗಾರಿಕೆಹೆಣೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆ ಮತ ಎಣಿಕೆ ವೇಳೆ ಮತಯಂತ್ರಗಳ ಜೊತೆ ವಿವಿ ಪ್ಯಾಟ್‌ಗಳನ್ನೂ ತಾಳೆ ಮಾಡುವಂತೆ ಆಗ್ರಹಿಸಿ ಎನ್‌ಡಿಎಯೇತರ 22 ಪಕ್ಷಗಳು ಮಂಗಳವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿರಲು ದೇವೇಗೌಡ, ಕುಮಾರಸ್ವಾಮಿ ದೆಹಲಿಗೆ ತೆರಳಬೇಕಿತ್ತು. ಆದರೆ, ಇಬ್ಬರೂ ಕೊನೆಕ್ಷಣದಲ್ಲಿ
ಪ್ರವಾಸ ರದ್ದುಗೊಳಿಸಿರುವುದು ರಾಜಕೀಯ ವಲಯದಲ್ಲಿ ವದಂತಿಹುಟ್ಟುಹಾಕಿದೆ.

ADVERTISEMENT

ಜೆಡಿಎಸ್‌ ನಾಯಕರ ಅಸಮಾಧಾನದ ಸುಳಿವು ಸಿಕ್ಕ ತಕ್ಷಣ ಬೆಂಗಳೂರಿಗೆ ಧಾವಿಸಿ ಬಂದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇವೇಗೌಡರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಮತ್ತು ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸುವ ನಿಟ್ಟಿನಲ್ಲಿ ಇಬ್ಬರು ನಾಯಕರು ಪೂರ್ವಭಾವಿ ವಿಚಾರ ವಿನಿಮಯ ಮಾಡಿದರು.

ರಾಹುಲ್ ಸೂಚನೆಯಂತೆ ಬೆಂಗಳೂರಿಗೆ ಬಂದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಜೊತೆ ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ಗೆ ಕಡಿಮೆ ಕ್ಷೇತ್ರಗಳು ಬರಲಿವೆ ಎಂದು ಭವಿಷ್ಯ ನುಡಿದಿರುವ ಬೆನ್ನಲ್ಲೆ, ಪಕ್ಷದ ಹಿರಿಯ ಶಾಸಕ ರೋಷನ್‌ ಬೇಗ್‌ ನೀಡಿದ ಹೇಳಿಕೆ ಮತ್ತು ಪ್ರಸ್ತುತ ರಾಜ್ಯ ರಾಜಕೀಯದಲ್ಲಿನ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಬಳಿಕ ನಾಯಕರ ಜೊತೆ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ವೇಣುಗೋಪಾಲ್‌ ಭೇಟಿ ಮಾಡಿದರು. ಬಿಜೆಪಿಯ ‘ಆಪರೇಷನ್ ಕಮಲ’ದ ಆತಂಕ ಮತ್ತು ಪಕ್ಷದ ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಬಣದ ನಡೆ ಹಾಗೂ ಅದಕ್ಕೆ ಪರಿಹಾರ ಹುಡುಕುವ ಬಗ್ಗೆಯೂ ಚರ್ಚೆ ನಡೆಸಿದರು.

ಮೈತ್ರಿ ಮುಂದುವರಿಸಿಕೊಂಡು ಹೋಗುವ ಬಗ್ಗೆಯೂ ಜೆಡಿಎಸ್‌ನ ಕೆಲವು ನಾಯಕರು ಅಪಸ್ವರ ಎತ್ತಿದ್ದಾರೆ. ‘ಮೈತ್ರಿ ಮುಂದುವರಿಸುವುದಾದರೆ ಬಿಜೆಪಿ ಜೊತೆ ಯಾಕೆ ಕೈ ಜೋಡಿಸಬಾರದು’ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು, ಈಗಾಗಲೇ ಬಿಜೆಪಿ ಜೊತೆ ಕಹಿ ಅನುಭವ ಆಗಿರುವುದರಿಂದ ಆ ಯೋಚನೆ ಬೇಡ ಎಂಬ ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ವಿರುದ್ಧ ‘ರೋಷ’ದ ಕಿಡಿ

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತ ಶಾಸಕರ ಬಣ ಕಾಂಗ್ರೆಸ್‌ ತ್ಯಜಿಸಲು ಮುಂದಾಗಿರುವ ಬೆನ್ನಲ್ಲೇ, ಹಿರಿಯ ಶಾಸಕ ರೋಷನ್ ಬೇಗ್ ಪಕ್ಷದ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ ಒಳಗಿನ ಬೇಗುದಿಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದುರಂಹಕಾರಿ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫ್ಲಾಪ್ ಶೋ ನಾಯಕ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬಫೂನ್’ ಎಂದು ಟೀಕಿಸಿರುವ ಬೇಗ್, ಎನ್‌ಡಿಎ ಬಗ್ಗೆ ಮೃಧುಧೋರಣೆ ವ್ಯಕ್ತಪಡಿಸಿದ್ದಾರೆ. ಬೇಗ್‌ ಅವರಿಗೆ ನೋಟಿಸ್‌ ನೀಡಿರುವ ಕೆಪಿಸಿಸಿ, ವಾರದೊಳಗೆ ಸಮಜಾಯಿಷಿ ನೀಡುವಂತೆ ಸೂಚಿಸಿದೆ. ಉತ್ತರಿಸದೇ ಇದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಅತೃಪ್ತ ಶಾಸಕರ ರಹಸ್ಯ ಚರ್ಚೆ

ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ.ನಾಗೇಂದ್ರ ಜತೆ ಇನ್ನೂ ಕೆಲವು ಶಾಸಕರು ಚರ್ಚೆ ನಡೆಸಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಈ ಪೈಕಿ, ಕೆಲವರು ಬಿಜೆಪಿ ಜೊತೆ ಕೈ ಜೋಡಿಸುವ ಚಿಂತನೆಯಲ್ಲಿದ್ದರೆ, ಇನ್ನೂ ಕೆಲವರು ಕಾಂಗ್ರೆಸ್‌ನಲ್ಲೇ ಇದ್ದು ಒತ್ತಡ ತಂತ್ರ ಮುಂದುವರಿಸಲು ಬಯಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.