ADVERTISEMENT

ಗಾಂಧಿ ಕುಟುಂಬದ ಹೆಸರಿನಲ್ಲಿ ಮಾಡಿರುವ ಆಸ್ತಿ ಋಣ ತೀರಿಸಬೇಕಿದೆ: ರಮೇಶ್‌ ಕುಮಾರ್‌

ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಹೇಳಿಕೆ ವಿವಾದ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 7:51 IST
Last Updated 22 ಜುಲೈ 2022, 7:51 IST
ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌
ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌    

ಬೆಂಗಳೂರು: ‘ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಬೆಂಬಲಕ್ಕೆ ನಿಂತು, ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಹೇಳಿದರು.

'ಈ ಕಠಿಣ ಸಂದರ್ಭದಲ್ಲಿ ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತು, ಋಣ ತೀರಿಸಬೇಕು. ಈ ಕರ್ತವ್ಯ ಮಾಡದಿದ್ದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತವೆ' ಎಂದೂ ಅವರು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ರಮೇಶ್‌ ಕುಮಾರ್‌, ಋಣ ಸಂದಾಯದ ವಿಚಾರ ಪ್ರಸ್ತಾಪಿಸಿದ್ದಾರೆ.

ಕೈ ನಾಯಕರ ತನಿಖೆ ಆಗಲಿ
ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರು–ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ. ಇದಕ್ಕೆ ನಾವು ಸೋನಿಯಾಗಾಂಧಿ ಅವರಿಗೆ ಋಣಿಯಾಗಬೇಕು ಎಂದು ಕಾಂಗ್ರೆಸ್‌ ನಾಯಕ ರಮೇಶ್ ಕುಮಾರ್ ಹೇಳಿದ್ದಾರೆ. ಕಾಂಗ್ರೆಸ್‌ನ ಎಲ್ಲ ನಾಯಕರನ್ನೂ ಇ.ಡಿ ತನಿಖೆಗೆ ಒಳಪಡಿಸಬೇಕು ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್‌ ಒತ್ತಾಯಿಸಿದ್ದಾರೆ.

ರಮೇಶ್‌ಕುಮಾರ್ ತಮ್ಮ ಸಹಜವಾದ ಭಾಷಣದ ವೇಳೆ ಬಹಳ ದಿನಗಳ ಬಳಿಕ ಸತ್ಯ ಹೇಳಿದ್ದಾರೆ. ಆದ್ದರಿಂದ ಸೋನಿಯಾ, ರಾಹುಲ್‌ ಗಾಂಧಿ ಮಾತ್ರವಲ್ಲ ಕಾಂಗ್ರೆಸ್‌ನ ಎಲ್ಲ ನಾಯಕರನ್ನೂ ಇ.ಡಿ ತನಿಖೆಗೆ ಒಳಪಡಿಸಬೇಕು. ಈ ಆರೋಪ ಮಾಡಿರುವುದು ಕಾಂಗ್ರೆಸ್ ನಾಯಕರೇ ಹೊರತು ಬಿಜೆಪಿ ನಾಯಕರಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮೇಧಾವಿ ನಾಯಕರಿಗೆ ಅಭಿನಂದನೆ
ಕಾಂಗ್ರೆಸ್‌ ಪಕ್ಷದ 60 ವರ್ಷಗಳ ‘ಲೂಟ್‌ ಇಂಡಿಯಾ’ ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ವರ್ಣಿಸಿದ ಮೇಧಾವಿ ನಾಯಕರಿಗೆ ಅಭಿನಂದನೆಗಳು ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಅವರು ಕಾಂಗ್ರೆಸ್‌ ಶಾಸಕ ರಮೇಶ್‌ಕುಮಾರ್ ಅವರನ್ನು ಉದ್ದೇಶಿಸಿ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ನಿಮ್ಮ ಪಕ್ಷದ ಹಿರಿಯ ನಾಯಕರೇ ಇಷ್ಟು ಪ್ರಾಮಾಣಿಕವಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನೇ ಒಪ್ಪಿಕೊಂಡ ಮೇಲೆ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತೀರಿ ಎಂದು ಅವರು ಕಾಂಗ್ರೆಸ್‌ ಪಕ್ಷವನ್ನು ಪ್ರಶ್ನಿಸಿದ್ದಾರೆ.

ಗಾಂಧಿ ಕುಟುಂಬದ ಹೆಸರಿನಲ್ಲಿ 3–4 ತಲೆಮಾರಿಗೆ ಆಗುವಷ್ಟು ಲೂಟಿ ಹೊಡೆದಿದ್ದೇನೆ, ಋಣ ತೀರಿಸೋಣ ಎಂದಿದ್ದಾರೆ. ಇವರ ಪ್ರಕಾರ ಇ.ಡಿ ಅಧಿಕಾರಿಗಳೇ ಸೋನಿಯಾಗಾಂಧಿ ಅವರ ಮನೆಗೆ ಬರಬೇಕಿತ್ತು. ಕಾಂಗ್ರೆಸ್‌ ನಿಷ್ಠೆ ದೇಶಕ್ಕೋ ಒಂದು ಕುಟುಂಬಕ್ಕೋ? ಕಾಂಗ್ರೆಸ್ ಅಧ್ಯಕ್ಷೆ ಕಾನೂನು ಮತ್ತು ಸಂವಿಧಾನಕ್ಕಿಂತ ದೊಡ್ಡವರೇ ಎಂದೂ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.