ADVERTISEMENT

ಬೊಮ್ಮಾಯಿ ಅವರು ಸರ್ಕಾರವನ್ನೇ ಸಂಘ ಪರಿವಾರಕ್ಕೆ ಅಡವಿಟ್ಟಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 9:04 IST
Last Updated 10 ಏಪ್ರಿಲ್ 2022, 9:04 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಸಂಪುಟ ಮತ್ತು ಪಕ್ಷದ ಮೇಲೆ ನಿಯಂತ್ರಣವಿಲ್ಲ. ಸರ್ಕಾರವನ್ನೇ ಸಂಘ ಪರಿವಾರಕ್ಕೆ ಅಡವಿಟ್ಟಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ʼಬೊಮ್ಮಾಯಿ ತಮ್ಮ ಜನರ ಗಮನವನ್ನು ಬೇರೆಡೆ ಸೆಳೆದು, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರವನ್ನು ಸಂಘ ಪರಿವಾರಕ್ಕೆ ಹೊರ ಗುತ್ತಿಗೆಗೆ ನೀಡಿದ್ದಾರೆ. ಅಲ್ಲಿರುವ ಕೆಲವು ಪುಂಡರ ಕೈಗೆ ಅಧಿಕಾರ ನೀಡಿರುವಂತೆ ಕಾಣುತ್ತಿದೆ. ಸರ್ಕಾರವನ್ನು ಸಂಘ ಪರಿವಾರಕ್ಕೆ ಅಡವಿಟ್ಟರೆ ಕುರ್ಚಿ ಉಳಿಸಿಕೊಳ್ಳಬಹುದು ಎಂದು ಬೊಮ್ಮಾಯಿ ಕನಸು ಕಾಣುತ್ತಿದ್ದಾರೆ. ಈ ಪುಂಡಾಟಿಕೆ ಅವರ ಕುರ್ಚಿಯನ್ನೂ ಕಿತ್ತುಕೊಳ್ಳಲಿದೆʼ ಎಂದರು.

ರಾಜ್ಯದ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಇನ್ನೂ ಅಧಿಕಾರದಲ್ಲಿದ್ದರೆ, ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌರ್ಜನ್ಯ ಎಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು. ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜ್ಯ ಬೇಡದ ಕೂಸು, ಅಳುವ ಕೂಸುಗಳನ್ನು ನೋಡಿಯಾಗಿದೆ. ಈಗಿನದ್ದು ಆಡುವ ಗೊಂಬೆಯ ಸರ್ಕಾರ. ಆ ಕೂಸುಗಳಿಗೆ ಜೀವವಾದರೂ ಇತ್ತು, ಈಗಿನದ್ದು ಸಂಪೂರ್ಣ ನಿರ್ಜೀವ ಆಟದ ಗೊಂಬೆ. ಮುಖ್ಯಮಂತ್ರಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆಯಂತಾಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಪ್ರತಿಪಾದಿಸುವ ರಾಮ ರಾಜ್ಯದ ಒಂದು ಚಿತ್ರವನ್ನು ರಾಮನವಮಿ ಸಮಯದಲ್ಲೇ ಶ್ರೀರಾಮ ಸೇನೆಯ ಗೂಂಡಾಗಳು ಧಾರವಾಡದಲ್ಲಿ ಜಗತ್ತಿನ ಎದುರು ಇಟ್ಟಿದ್ದಾರೆ. ಇಂತಹ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆ ಇದೆ? ಧಾರವಾಡದಲ್ಲಿ ಕೇವಲ ಮುಸ್ಲಿಂ ವ್ಯಾಪಾರಿ ಮೇಲೆ ದಾಳಿಯಾಗಿಲ್ಲ. ಅದು ಕಲ್ಲಂಗಡಿ ಬೆಳೆಯುವ ರೈತರ ಮೇಲಿನ ದಾಳಿಯೂ ಹೌದು. ಹೀಗೆಯೇ ಬಿಟ್ಟರೆ ಇವರು ಎಲ್ಲರ ಮನೆ ಬಾಗಿಲನ್ನೂ ತಟ್ಟುತ್ತಾರೆ ಎಂದರು.

ಮೂಕ ಬಸವಣ್ಣ: ಸಿ.ಟಿ. ರವಿ, ರವಿಕುಮಾರ್‌ ಮತ್ತಿತರ ಕೂಗುಮಾರಿಗಳು ರಾಜ್ಯದ ಪೊಲೀಸ್‌ ಮಹಾನಿರ್ದೇಶಕರ ಹೇಳಿಕೆಯನ್ನೇ ಧಿಕ್ಕರಿಸುತ್ತಿದ್ದಾರೆ. ಅವರನ್ನು ಬಾಯಿ ಮುಚ್ಚಿಸಲು ಆಗದ ಬೊಮ್ಮಾಯಿ ಮೂಕ ಬಸವಣ್ಣನಾಗಿದ್ದಾರೆ. ಇಂತಹ ತಂಟೆಕೋರರ ಹೇಳಿಕೆಯಿಂದ ಪೊಲೀಸ್‌ ಇಲಾಖೆಯ ನೈತಿಕ ಸ್ಥೈರ್ಯ ಕುಸಿಯುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಚಾಮರಾಜಪೇಟೆ ಕೊಲೆ ಪ್ರಕರಣದ ವಿಚಾರದಲ್ಲಿ ಸಿ.ಟಿ.ರವಿ, ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ನಗರ ಪೊಲೀಸ್ ಕಮಿಷನರ್‌ ಹೇಳಿಕೆಗಳು ವಿಭಿನ್ನವಾಗಿವೆ. ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಗೃಹ ಸಚಿವರ ವೈಫಲ್ಯ ಎತ್ತಿ ತೋರಿಸುತ್ತದೆ ಎಂದರು.

ಹಿಂದೂಗಳನ್ನು ಪ್ರಚೋದಿಸುವವರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ಇದು ಮುಖ್ಯಮಂತ್ರಿಯವರ ಪಾಪದ ಕೂಸು. ಬೀದಿ ಗೂಂಡಾಗಳ ಪುಂಡಾಟಿಕೆಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಬೊಮ್ಮಾಯಿ ಹೇಳಿದ್ದರು. ಆ ಬಳಿಕ ಕೊಲೆ, ಹಿಂಸಾಚಾರ, ಗಲಾಟೆ, ದೌರ್ಜನ್ಯಗಳ ಹೊಸ ಸರಣಿ ರಾಜ್ಯದಲ್ಲಿ ಪ್ರಾರಂಭವಾಗಿದ್ದು. ಇದರಿಂದ ಕಾನೂನು ವ್ಯವಸ್ಥೆಯೇ ಕುಸಿದುಬಿದ್ದು ನಾಗರಿಕ ಯುದ್ದಕ್ಕೆ ದಾರಿಮಾಡಿಕೊಟ್ಟಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಘ ಪರಿವಾರದ ಜೊತೆಗಿನ ಸಹಯೋಗದೊಂದಿಗೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹರಡುತ್ತಿರುವ ಕೋಮುದ್ವೇಷದ ವಾತಾವರಣದಿಂದ ರಾಜ್ಯದ ಉದ್ಯಮಿಗಳು ಬೇಸತ್ತುಹೋಗಿದ್ದಾರೆ. ಹೂಡಿಕೆದಾರರು ಹೊರ ರಾಜ್ಯದ ಕಡೆ ಮುಖಮಾಡುತ್ತಿದ್ದಾರೆ. ಸಹಬಾಳ್ವೆ, ಶಾಂತಿ, ಸೌಹಾರ್ದಕ್ಕೆ ಹೆಸರಾದ ಕನ್ನಡಿಗರು ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಬೊಮ್ಮಾಯಿ ಅವರ ಸರ್ಕಾರವನ್ನು ಕನ್ನಡಿಗರು ಕ್ಷಮಿಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.