ADVERTISEMENT

ಶಿವಮೊಗ್ಗ ಗಲಾಟೆಯಲ್ಲಿ ಎಸ್‌ಡಿಪಿಐ ಕೈವಾಡವಿದ್ದರೆ ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 7:35 IST
Last Updated 16 ಆಗಸ್ಟ್ 2022, 7:35 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಬಿಜೆಪಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು ಇವರೇ. ಶಿವಮೊಗ್ಗದಲ್ಲಿ ಮುಸ್ಲಿಮರಿರುವ ಪ್ರದೇಶದಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ್ದಾರೆ. ಭಾವಚಿತ್ರ ಹಾಕಲಿ ಬೇಡ ಅನ್ನೋದಿಲ್ಲ. ಆದರೆ, ಸಾವರ್ಕರ್ ಭಾವಚಿತ್ರ ಹಾಕಿ, ಟಿಪ್ಪು ಭಾವಚಿತ್ರ ತೆಗೆದಿದ್ದಾರೆ. ಹೀಗೆ ಮಾಡಿದರೆ ಗಲಭೆ ಆಗುವುದಿಲ್ಲವೇ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಬಗ್ಗೆ ಈ್ವರಪ್ಪ ಆರೋಪ ಮಾಡುತ್ತಲೇ ಇರುತ್ತಾರೆ. ಬಿಜೆಪಿಯವರು ತಪ್ಪು ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಮಗುವನ್ನು ಚಿವುಟುವವರೂ ಇವರೇ, ತೊಟ್ಟಿಲು ತೂಗುವವರೂ ಇವರೇ. ಘಟನೆಯಲ್ಲಿ ಎಸ್‌ಡಿಪಿಐ ಕೈವಾಡದ ಬಗ್ಗೆ ಇವರ ಬಳಿ ದಾಖಲೆ ಇದ್ದರೆ ಕ್ರಮ ತೆಗೆದುಕೊಳ್ಳಲಿ. ಸರ್ಕಾರ ಇವರದೇ ಇದೆಯಲ್ಲವೇ?’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಮುಖ್ಯಮಂತ್ರಿ ಹೊಗುತ್ತಾರೆ. ಇನ್ನಿಬ್ಬರ ಮನೆಗೆ ಯಾಕೆ ಹೋಗುವುದಿಲ್ಲ. ಸರ್ಕಾರದ ದುಡ್ಡು ಅಲ್ಲವೇ? ತೆರಿಗೆ ಹಣ ಅಲ್ಲವೇ? ಮಸೂದ್, ಫಾಜಿಲ್ ಅವರಿಬ್ಬರಿಗೂ ಪರಿಹಾರ ಕೊಡಬೇಕಲ್ಲವೇ? ಇಬ್ಬಗೆಯ ರಾಜಕೀಯ ಮಾಡಬೇಡಿ’ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ADVERTISEMENT

‘ಮುಖ್ಯಮಂತ್ರಿ ಅವರು ಆರ್‌ಎಸ್‌ಎಸ್ ಕೈಗೊಂಬೆ ಆಗಿದ್ದಾರೆ. ಇವರು ನೆಹರೂ ಭಾವಚಿತ್ರವನ್ನು ಹಾಕಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ನೆಹರೂ ಸ್ಮರಣೆ ಮಾಡುತ್ತಾರೆ. ಇವರಿಗೆ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟು ಬಂದ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಬಿಜೆಪಿಯವರದ್ದು ನಕಲಿ ದೇಶಭಕ್ತಿ‘ ಎಂದರು.

‘ಅವಕಾಶ ಸಿಕ್ಕಿದರೆ ಸಿದ್ದರಾಮಯ್ಯ ಸಿಎಂ ಆಗಲಿ’ ಎಂಬ ಸಚಿವ ಶ್ರೀರಾಮುಲು ಹೇಳಿಕೆ‌ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಶ್ರೀರಾಮುಲು, ಈಶ್ವರಪ್ಪ ನನ್ನ ಬಗ್ಗೆ ಏನೇನೋ ಮಾತನಾಡುತ್ತಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದರು.

ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿದ ಸರ್ಕಾರ: ‘ರಾಜ್ಯ ಸರ್ಕಾರ ಕಾನೂನು ವ್ಯವಸ್ಥೆಯನ್ನು ಬಿಗಿ ಮಾಡಬೇಕು. ದಕ್ಷ ಅಧಿಕಾರಿಗಳನ್ನು ಸೂಕ್ತ ಸ್ಥಳಕ್ಕೆ ನಿಯೋಜಿಸಿ, ಪೂರ್ಣ ಪ್ರಮಾಣದ ಅಧಿಕಾರ ಕೊಡಬೇಕು. ಅವರು ಮುಕ್ತವಾಗಿ ಕೆಲಸ ಮಾಡಲು ಬಿಡಬೇಕು. ಆದರೆ, ಬಿಜೆಪಿಯವರು ದಕ್ಷ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ದೂರಿದರು.

‘ಎಸ್‌ಡಿಪಿಐಯನ್ನು ನಿಷೇಧಿಸಬೇಕೆಂದು ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಯವರು ಹೇಳುತ್ತಿದ್ದರು. ಈಗ ಇವರದೇ ಸರ್ಕಾರ ಇದೆ. ಆ ಸಂಘಟನೆಯನ್ನು ನಿಷೇಿಧಿಸಬಹುದಲ್ಲವೇ? ಎಸ್‌ಡಿಪಿಐ ಇದ್ದರೆ ಕಾಂಗ್ರೆಸ್ ಮತ ವಿಭಜನೆಯಾಗುತ್ತದೆ. ಹೀಗಾಗಿ, ಎಸ್‌ಡಿಪಿಐಯನ್ನು ಬಿಜೆಪಿ ಉಳಿಸಿಕೊಳ್ಳುತ್ತಿದೆ‘ ಎಂದೂ ಅವರು ಟೀಕಿಸಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.