ADVERTISEMENT

ಬೀದಿಗಿಳಿದ ಕೆಪಿಸಿಸಿ: ‘ಕೈ’ ನಾಯಕರ ಆಕ್ರೋಶ, ಕಾರ್ಯಕರ್ತರ ಕೆಚ್ಚು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 8:12 IST
Last Updated 4 ಸೆಪ್ಟೆಂಬರ್ 2019, 8:12 IST
ಬೆಂಗಳೂರಿನ ದಾಸರಹಳ್ಳಿ ಜಂಕ್ಷನ್ 8ನೇ ಮೈಲಿಯಲ್ಲಿ ಕಾಂಗ್ರೆಸ್–ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ ಜಾಂ ಉಂಟಾಯಿತು. (ಪ್ರಜಾವಾಣಿ ಚಿತ್ರ: ಬಿ.ಎಚ್.ಶಿವಕುಮಾರ)
ಬೆಂಗಳೂರಿನ ದಾಸರಹಳ್ಳಿ ಜಂಕ್ಷನ್ 8ನೇ ಮೈಲಿಯಲ್ಲಿ ಕಾಂಗ್ರೆಸ್–ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ ಜಾಂ ಉಂಟಾಯಿತು. (ಪ್ರಜಾವಾಣಿ ಚಿತ್ರ: ಬಿ.ಎಚ್.ಶಿವಕುಮಾರ)   

ಬೆಂಗಳೂರು: ಶಾಸಕ ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿದರು. ಬಿಜೆಪಿ ನಾಯಕರ ವಿರುದ್ದ ಧಿಕ್ಕಾರ ಕೂಗಿದ ಪ್ರತಿಭಟನೆಕಾರರು, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, 'ಶಿವಕುಮಾರ್ ಅವನ್ನು ಬಂಧಿಸುವುದು ಸ್ಪಷ್ಟವಾಗಿ ಗೊತ್ತಿತ್ತು. ಸಿಬಿಐ, ಇಡಿ, ಐಟಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಬಿಜೆಪಿಯವರನ್ನು ಬಿಟ್ಟು ನಮ್ಮ ಪಕ್ಷದವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ' ಎಂದು ದೂರಿದರು.

ADVERTISEMENT

‘ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಲುವಾಗಿ ಈ ಕೆಲಸ ಮಾಡಿದ್ದಾರೆ. ಇಡಿ, ಐಟಿ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ. ಗುಜರಾತ್ ನ ಶಾಸಕರಿಗೆ ರಕ್ಷಣೆ ಕೊಟ್ಟ ಒಂದೇ ಕಾರಣಕ್ಕೆ ಅವರ ಮೇಲೆ ಐಟಿ ದಾಳಿ ನಡೆಯಿತು’ಎಂದರು.

‘ಯಾವುದೇ ವಿಚಾರಣೆ ಇದ್ದರೂ ಭಾಗಿಯಾಗಿದ್ದಾರೆ. ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅವರ ತಾಯಿ, ಪತ್ನಿ, ಪುತ್ರಿಯ ವಿಚಾರಣೆ ನಡೆಸಿದ್ದಾರೆ. ಗಣೇಶ ಹಬ್ಬಕ್ಕೆ ಮನೆಗೆ ಹೋಗಲು ಅವಕಾಶ ಕೊಡಲಿಲ್ಲ. ತಂದೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಏನಾದರೂ ಸಾಕ್ಷಿ ಇದ್ದರೆ ಎಫ್ ಐಆರ್ ಹಾಕಲಿ. ಚಾರ್ಜ್ ಶೀಟ್ ಹಾಕಿ ಕೋರ್ಟ್ ಗೆ ಕರೆದುಕೊಂಡು ಹೋಗಲಿ. ಅದು ಬಿಟ್ಟು ಹೀಗೆ ಷಡ್ಯಂತ್ರ ನಡೆಸುವುದು ಸರಿಯಲ್ಲ’ಎಂದರು.

‘ಚಿದಂಬರಂ ಅವರೂ ವಿಚಾರಣೆಗೆ ಸಹಕಾರ ಕೊಟ್ಟಿದ್ದಾರೆ. ಆದರೂ ಅವರನ್ನು ಸಿಬಿಐ ಬಂಧಿಸಿದೆ. ಅವರೇನು ಕೊಲೆಗಾರರಾ?ಚಿದಂಬರಂ, ಡಿಕೆಶಿ ವಿರುದ್ಧ ಯಾಕೆ ಹೀಗೆ ಮಾಡ್ತಿದ್ದೀರಾ. ರಾತ್ರಿ ವೇಳೆಯೇ ಯಾಕೆ ಬಂಧಿಸಬೇಕು ಕಾಂಪೌಂಡ್ ಹಾರಿ ಬಂಧಿಸುವ ಅಗತ್ಯವಾದರೂ ಏನಿದೆ’ಎಂದು ಪ್ರಶ್ನಿಸಿದ ದಿನೇಶ್, ‘ಇದರಲ್ಲೇ ಗೊತ್ತಾಗುತ್ತೆ ಬಿಜೆಪಿಯ ಷಡ್ಯಂತ್ರ. ಬಿಜೆಪಿಗೆ ಸೇರುವಂತೆ ವಿರೋಧ ಪಕ್ಷದ ನಾಯಕರ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಬಿಜೆಪಿಗೆ ಬರುವಂತೆ ಹೆದರಿಸಲಾಗುತ್ತಿದೆ. ಇದನ್ನ ಖುದ್ದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ’ಎಂದರು.

‘ಶಿವಕುಮಾರ್ ಜೊತೆ ನಾವು ಇರುತ್ತೇವೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವಂಥವರು. ಇವತ್ತು ದೊಡ್ಡ ನಾಯಕರಾಗಿ ಬೆಳೆದಿರುವವರು. ರಾಜಕೀಯವಾಗಿ ಅವರನ್ನು ನೇರವಾಗಿ ಎದುರಿಸಲು ಬಿಜೆಪಿಗೆ ಆಗುತ್ತಿಲ್ಲ.‌ ಹೀಗಾಗಿಯೇ ವಾಮಮಾರ್ಗ ಹಿಡಿದಿದ್ದಾರೆ. ಇವರದ್ದು ಹೇಡಿತನದ ರಾಜಕೀಯ. ಇದು ಮುಂದೊಂದು ದಿನ ನಿಮಗೇ ಉಲ್ಟಾ ಹೊಡೆಯಲಿದೆ’ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

‘ನೀವು ಏನು ಮಾಡ್ತಿದ್ದೀರಿ ಎಂದು ರಾಜ್ಯದ ಜನರಿಗೂ ಗೊತ್ತಿದೆ. ಯಡಿಯೂರಪ್ಪ ವಿರುದ್ಧ ಯಾಕೆ ಕ್ರಮ ಇಲ್ಲ. ಆಪರೇಷನ್ ಕಮಲದ ಆಡಿಯೋ ಇದೆ. ಸುಪ್ರೀಂ ಕೋರ್ಟ್ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಶಾಸಕರಿಗೂ ಕೋಟ್ಯಂತರ ರೂಪಾಯಿ ಆಮಿಷದ ಆಡಿಯೋ ಇದೆ. ಆದರೆ, ಯಾಕೆ ಅವರ ವಿರುದ್ಧ ದಾಳಿ ಇಲ್ಲ. ಒಬ್ಬ ಜವಾಬ್ದಾರಿಯುತ ಶಾಸಕರೊಬ್ಬರು ವಿಧಾನಸಭೆಯಲ್ಲೇ ಅಧಿಕೃತವಾಗಿ ಹೇಳಿದ್ದಾರೆ. ಡಿಸಿಎಂ ಅಶ್ವತ್ ನಾರಾಯಣ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಯಾಕೆ ಅವರನ್ನು ಟಚ್ ಮಾಡಲಿಲ್ಲ’ಎಂದು ಪ್ರಶ್ನಿಸಿದರು.

‘ಐಟಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಆದರೂ ಬಿಜೆಪಿ ನಾಯಕರನ್ನು ಬಂಧಿಸಲಿಲ್ಲ. ಎಲ್ಲ ದಾಳಿಗಳು ಕೂಡ ವಿರೋಧ ಪಕ್ಷದ ನಾಯಕರ ಮೇಲೆ ನಡೆಯುತ್ತಿವೆ’ಎಂದು ಆಕ್ರೋಶ ವ್ಯಕ್ತಪಡಿಸಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.