ADVERTISEMENT

ಒಗ್ಗೂಡಿದ ಕೈ ‘ಬಣ’ ನಾಯಕರು

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:47 IST
Last Updated 26 ಜನವರಿ 2020, 19:47 IST
   

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಬಣ ರಾಜಕಾರಣ ತೀವ್ರ ಸ್ವರೂಪ ಪಡೆದುಕೊಂಡಿದ್ದ ಬೆನ್ನಲ್ಲೇ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಭಾನುವಾರ ಚರ್ಚಿಸಿರುವುದು ಪಕ್ಷದ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನಸಭೆ ಶಾಸಕಾಂಗ ಪಕ್ಷ (ಸಿಎಲ್‌ಪಿ), ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದು, ಇದೇ ವಿಚಾರದಲ್ಲಿ ಮೂಲ ಹಾಗೂ ವಲಸೆ ಕಾಂಗ್ರೆಸ್ ಬಣಗಳು ಹುಟ್ಟಿಕೊಂಡಿದ್ದವು. ಈ ಇಬ್ಬರೂ ನಾಯಕರು ಒಂದೊಂದು ಬಣದ ಪರವಾಗಿ ನಿಂತಿದ್ದರು. ಈಗ ಅದೇ ನಾಯಕರು ಮುಖಾಮುಖಿಯಾಗಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ಉಪಾಹಾರದ ನೆಪದಲ್ಲಿ ನಗರದ ಶಿವಾನಂದ ವೃತ್ತದಲ್ಲಿ ಇರುವ ಜನಾರ್ದನ ಹೋಟೆಲ್‌ಗೆ ಪ್ರಮುಖ ನಾಯಕರು ಆಗಮಿಸಿದರು. ಈ ಸಂದರ್ಭದಲ್ಲಿ ಇಬ್ಬರು ನಾಯಕರು ಕೆಲಹೊತ್ತು ಪ್ರತ್ಯೇಕವಾಗಿ ಚರ್ಚಿಸಿ, ಪಕ್ಷದಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಪ್ರಯತ್ನ ನಡೆಸಿದರು. ಸಿಎಲ್‌ಪಿ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪ್ರತ್ಯೇಕಿಸದಂತೆ ಸಿದ್ದರಾಮಯ್ಯ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಿಎಲ್‌ಪಿ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಮಹಾರಾಷ್ಟ್ರದಲ್ಲಿ ಪ್ರತ್ಯೇಕಿಸಿ ಇಬ್ಬರಿಗೆ ಅಧಿಕಾರ ಹಂಚಿಕೆ ಮಾಡುವ ಸೂತ್ರವನ್ನು ಖರ್ಗೆ ರೂಪಿಸಿದ್ದರು. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರುವಂತೆ ಪಕ್ಷದ ವರಿಷ್ಠರ ಮೇಲೆ ಹಿರೀಕರು ಒತ್ತಡ ತಂದಿದ್ದರು. ‘ಎರಡೂ ಸ್ಥಾನಗಳನ್ನು ಪ್ರತ್ಯೇಕಿಸಬಾರದು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ತಮ್ಮ ಬೆಂಬಲಿಗ ಎಂ.ಬಿ.ಪಾಟೀಲ ಅವರನ್ನೇ ನೇಮಕ ಮಾಡಬೇಕು, ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕು’ ಎಂದು ಸಿದ್ದರಾಮಯ್ಯ ಪಟ್ಟುಹಿಡಿದಿದ್ದರು.

ಬಣ ರಾಜಕಾರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಖರ್ಗೆ ಸಹ ಮಧ್ಯೆ ಪ್ರವೇಶಿಸಿದ್ದರು. ಹೈಕಮಾಂಡ್‌ಗೆ ಕೆಲವು ಸಲಹೆಗಳನ್ನು ನೀಡಿದ್ದರು. ಸಿದ್ದರಾಮಯ್ಯಗೆ ಸಿಎಲ್‌ಪಿ, ವಿರೋಧ ಪಕ್ಷದ ನಾಯಕನ ಸ್ಥಾನ ನೀಡುವುದಕ್ಕೂ ಸಹಮತ ವ್ಯಕ್ತಪಡಿಸಿರಲಿಲ್ಲ. ಹಾಗಾಗಿ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿ ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.