ಬೆಂಗಳೂರು: 'ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಚಾರ ಪಕ್ಷದ ಹೈಕಮಾಂಡ್ ಕೈಯಲ್ಲಿದ್ದು, ಏನು ನಡೆಯುತ್ತಿದೆ ಎಂಬುದನ್ನು ಯಾರು ಹೇಳಲಾಗದು' ಎಂಬ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿರುಗೇಟು ನೀಡಿದ್ದಾರೆ.
ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು 'ಆಕ್ಸಿಡೆಂಟಲ್' ಎಐಸಿಸಿ ಅಧ್ಯಕ್ಷ ಎಂದು ವ್ಯಂಗ್ಯವಾಡಿದ್ದಾರೆ.
'ಬಹುಶಃ ಕಾಂಗ್ರೆಸ್ ನಮಗೆ ಮತ್ತೊಬ್ಬ 'ಆಕ್ಸಿಡೆಂಟಲ್' ನಾಯಕನನ್ನು ನೀಡಿದ್ದಾರೆ ಎಂದು ಅನಿಸುತ್ತಿದೆ. ಮೊದಲನೇಯದಾಗಿ 'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಡಾ.ಮನಮೋಹನ್ ಸಿಂಗ್. ಅವರು ಪ್ರಧಾನಿಯಾಗಿದ್ದರೂ ಯಾವುದೇ ಅಧಿಕಾರ ಇರಲಿಲ್ಲ' ಎಂದಿದ್ದಾರೆ.
'ಈಗ ಆಕ್ಸಿಡೆಂಟಲ್ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ಏನು ಯೋಚಿಸುತ್ತಿದೆ ಎಂದು ನನಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ. ಖರ್ಗೆ ಅವರೇ ನೀವು ಹೈಕಮಾಂಡ್ ಆಗಿಲ್ಲದಿದ್ದರೆ ಇನ್ಯಾರು? ರಾಹುಲ್ ಗಾಂಧಿ? ಸೋನಿಯಾ ಗಾಂಧಿ? ಪ್ರಿಯಾಂಕಾ ಗಾಂಧಿ? ಅಥವಾ ಅದೃಶ್ಯ ಸಮಿತಿಯೇ' ಎಂದು ಪ್ರಶ್ನಿಸಿದ್ದಾರೆ.
'ಕಾಂಗ್ರೆಸ್‌ನಲ್ಲಿ ಅಧ್ಯಕ್ಷರು ಕೇವಲ ಹೆಸರಿಗೆ ಮಾತ್ರ. ನಿರ್ಣಯಗಳನ್ನು ಜನಪಥದಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ತೆಗೆದುಕೊಳ್ಳುಲಾಗುತ್ತದೆ' ಎಂದು ಆರೋಪಿಸಿದ್ದಾರೆ.
'ಕಾಂಗ್ರೆಸ್ ಅನ್ನು ಖರ್ಗೆ ಮುನ್ನಡೆಸುತ್ತಿಲ್ಲ. ಅದೇ ಸ್ಕ್ರಿಪ್ಟ್ ಆದರೆ ಹೊಸ ನಟ. ಎಲ್ಲವೂ ಗಾಂಧಿ ಕುಟಂಬದಿಂದ ನಿರ್ದೇಶಿಸಲ್ಪಟ್ಟಿದೆ' ಎಂದು ಹೇಳಿದ್ದಾರೆ.
ಖರ್ಗೆ ತಮ್ಮ ಹೇಳಿಕೆಯಲ್ಲಿ, 'ಹೈಕಮಾಂಡ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಯಾರು ಹೇಳಲಾಗದು. ಮುಂದಿನ ಕ್ರಮ ಕೈಗೊಳ್ಳುವ ಹಕ್ಕು ಹೈಕಮಾಂಡ್ ಗಿದೆ. ಆದರೆ, ಯಾರೂ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಬಾರದು' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.